ನಗರದ ಹಂಪನಕಟ್ಟೆಯ ವಿಶ್ವವಿದ್ಯಾಲಯ ಕಾಲೇಜಿನಲ್ಲೇ ತುಳು ಎಂ.ಎ. ಅಧ್ಯಯನ ಕೇಂದ್ರವನ್ನು ಮುಂದುವರಿಸಬೇಕು ಹಾಗೂ ಮಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತುಳುವನ್ನು ರಾಜ್ಯದ ಅಧಿಕೃತ ಭಾಷೆಯನ್ನಾಗಿ ಘೋಷಿಸಬೇಕು ಎಂದು ‘ಪರಪು’ ತುಳು ಎಂ.ಎ. ಹಿರಿಯ ವಿದ್ಯಾರ್ಥಿಗಳ ಸಂಘ ಆಗ್ರಹಿಸಿದೆ.

ಮಂಗಳೂರು ವಿಶ್ವವಿದ್ಯಾಲಯವು 2018ರಲ್ಲಿ ಹಂಪನಕಟ್ಟೆಯ ವಿಶ್ವವಿದ್ಯಾಲಯ ಕಾಲೇಜಿನಲ್ಲಿ ತುಳು ಸ್ನಾತಕೋತ್ತರ ಅಧ್ಯಯನ ಕೇಂದ್ರ ಆರಂಭಿಸಿತ್ತು. ಉತ್ತಮ ಪಠ್ಯಕ್ರಮದೊಂದಿಗೆ ಆರಂಭವಾದ ಈ ಕೋರ್ಸ್‌ನಲ್ಲಿ ಏಳು ಬ್ಯಾಚ್‌ಗಳಲ್ಲಿ ಸುಮಾರು 150 ಮಂದಿ ವಿದ್ಯಾರ್ಥಿಗಳು ತುಳು ಎಂ.ಎ. ಅಧ್ಯಯನ ಮಾಡಿದ್ದಾರೆ. ಆದರೆ ಕೋರ್ಸ್‌ನ್ನು ಹಂಪನಕಟ್ಟೆಯಿಂದ ಕೊಣಾಜೆಯ ವಿಶ್ವವಿದ್ಯಾಲಯ ಕ್ಯಾಂಪಸ್‌ಗೆ ಸ್ಥಳಾಂತರಿಸಿದ ಬಳಿಕ ಪ್ರವೇಶಾತಿ ಶೂನ್ಯವಾಗಿದೆ ಎಂದು ‘ಪರಪು’ ಅಧ್ಯಕ್ಷ ಸುಭಾಷ್‌ಚಂದ್ರ ಕಣ್ವತೀರ್ಥ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಉಡುಪಿ, ಸುಳ್ಯ, ಪುತ್ತೂರು, ಬೆಳ್ತಂಗಡಿ ಸೇರಿದಂತೆ ದೂರದ ಪ್ರದೇಶಗಳ ಆಸಕ್ತರಿಗೆ ಕೊಣಾಜೆಗೆ ತೆರಳಿ ಅಧ್ಯಯನ ಮಾಡಲು ತೊಂದರೆಯಾಗುತ್ತಿರುವುದು ಪ್ರವೇಶಾತಿ ಕುಸಿತಕ್ಕೆ ಕಾರಣವಾಗಿದೆ. ತುಳು ಎಂ.ಎ. ಅಧ್ಯಯನಕ್ಕೆ ಮುಂದಾಗುವವರು ಭಾಷೆಯ ಬೆಳವಣಿಗೆ ಹಾಗೂ ಸಂರಕ್ಷಣೆಯ ಉದ್ದೇಶದಿಂದ ಬರುತ್ತಾರೆ. ಹೀಗಾಗಿ ವಿದ್ಯಾರ್ಥಿಗಳ ಅನುಕೂಲವನ್ನು ಪರಿಗಣಿಸಿ ಹಂಪನಕಟ್ಟೆಯಲ್ಲೇ ತುಳು ಎಂ.ಎ. ಅಧ್ಯಯನ ಕೇಂದ್ರವನ್ನು ಪುನರಾರಂಭಿಸಿ ಶಾಶ್ವತವಾಗಿ ಮುಂದುವರಿಸಬೇಕು ಎಂದು ಅವರು ಒತ್ತಾಯಿಸಿದರು.
ಹಂಪನಕಟ್ಟೆಯ ತುಳು ಎಂ.ಎ. ಕೇಂದ್ರದಲ್ಲಿದ್ದ ವಿದ್ಯಾರ್ಥಿಗಳ ಅಗತ್ಯತೆಗಳನ್ನು ಗಮನಿಸಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಗ್ರಂಥಾಲಯ ಹಾಗೂ ಅಗತ್ಯ ಪೀಠೋಪಕರಣಗಳನ್ನು ಒದಗಿಸಿದ್ದರು. ಆದರೆ ಕೋರ್ಸ್ ಸ್ಥಳಾಂತರಗೊಂಡ ಬಳಿಕ ಈ ಸೌಲಭ್ಯಗಳು ಬಳಕೆಯಾಗದೆ ಉಳಿದಿವೆ. ಮಂಗಳೂರು ವಿಶ್ವವಿದ್ಯಾಲಯದ ನಿರ್ಧಾರಗಳಿಂದಲೇ ತುಳು ಅಧ್ಯಯನ ಕೇಂದ್ರ ಅತಂತ್ರ ಸ್ಥಿತಿಗೆ ತಲುಪಿದೆ ಎಂದು ಸುಭಾಷ್‌ಚಂದ್ರ ಕಣ್ವತೀರ್ಥ ಆರೋಪಿಸಿದರು.
ಉನ್ನತ ಶಿಕ್ಷಣ ಹಂತದಲ್ಲಿ ತುಳು ಅಧ್ಯಯನಕ್ಕೆ ಹೆಚ್ಚಿನ ಉತ್ತೇಜನ ದೊರೆತರೆ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಕಾಲೇಜು ಹಂತದಲ್ಲಿಯೂ ತುಳು ಭಾಷಾ ಅಧ್ಯಯನಕ್ಕೆ ಬಲ ಸಿಗಲಿದೆ. ಮಂಗಳೂರು ವಿಶ್ವವಿದ್ಯಾಲಯವೇ ತುಳು ಭಾಷೆಯ ಶೈಕ್ಷಣಿಕ ಬೆಳವಣಿಗೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ‘ಪರಪು’ ಉಪಾಧ್ಯಕ್ಷ ಹರೀಶ ಎ., ಸದಸ್ಯರಾದ ಗೀತಾ ಜೈನ್, ಭಾಗ್ಯಶ್ರೀ ಶೆಟ್ಟಿ, ಶಿವರಾಮ ಶೆಟ್ಟಿ, ಚಂದ್ರಹಾಸ ಕಣಂತೂರು ಹಾಗೂ ಜ್ಞಾನೇಶ್ವರಿ ಉಪಸ್ಥಿತರಿದ್ದರು.



