ದುಬೈನಿಂದ ಇಸ್ರೇಲ್‌ನ ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದ ಕಾಕ್‌ಪಿಟ್‌ನಲ್ಲಿ ಸಹ ಪೈಲಟ್ ನಡೆಸಿದ ಎನ್ನಲಾದ ವಿಧ್ವಂಸಕ ಕೃತ್ಯದ ಯತ್ನವನ್ನು ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ತಡೆದಿದ್ದಾರೆ ಎಂದು ವರದಿಯಾಗಿದೆ.

ವಿಮಾನದ ವ್ಯವಸ್ಥೆಗಳನ್ನು ಹಾಳುಮಾಡಲು ಸಹ ಪೈಲಟ್ ಯತ್ನಿಸಿದ ವೇಳೆ ಕ್ಯಾಪ್ಟನ್ ಮಚ್ಚಾರ್ ಅವರನ್ನು ಎದುರಿಸಿ ತಡೆದಿದ್ದಾರೆ ಎನ್ನಲಾಗಿದೆ. ಈ ವೇಳೆ ಉಂಟಾದ ಸಂಘರ್ಷದಲ್ಲಿ ಮಚ್ಚಾರ್ ಅವರಿಗೆ ಚಾಕುವಿನಿಂದ ಹಲ್ಲೆ ನಡೆದಿದ್ದು, ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಗಾಯಗೊಂಡಿದ್ದರೂ ಕಾಕ್‌ಪಿಟ್‌ನಲ್ಲಿ ಪರಿಸ್ಥಿತಿಯನ್ನು ನಿಯಂತ್ರಿಸಲು ಕ್ಯಾಪ್ಟನ್ ಮಚ್ಚಾರ್ ಪ್ರಯತ್ನಿಸಿದ್ದಾರೆ ಎನ್ನಲಾಗಿದ್ದು, ಈ ಕುರಿತ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಘಟನೆಯ ಹಿನ್ನೆಲೆಯಲ್ಲಿ ಕೆಲಕಾಲ ವಿಮಾನ ಅಪಹರಣದ ಆತಂಕವೂ ಉಂಟಾಗಿತ್ತು. ಆದರೆ ಬಳಿಕ ಅಪಹರಣದ ಸಾಧ್ಯತೆಯನ್ನು ತಳ್ಳಿಹಾಕಲಾಯಿತು ಎಂದು ವರದಿಯಾಗಿದೆ.
ಬಳಿಕ ಇತರ ಪೈಲಟ್‌ಗಳು ವಿಮಾನದ ನಿಯಂತ್ರಣವನ್ನು ವಹಿಸಿಕೊಂಡು ಸೌದಿ ಅರೇಬಿಯಾದ ಪರ್ಯಾಯ ವಿಮಾನ ನಿಲ್ದಾಣವೊಂದರಲ್ಲಿ ವಿಮಾನವನ್ನು ಸುರಕ್ಷಿತವಾಗಿ ಇಳಿಸಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯ ಕುರಿತು ಸಂಬಂಧಿತ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಭಾರತೀಯ ಪ್ರಜೆಯಾಗಿರುವ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಕಳೆದ ನಾಲ್ಕು ವರ್ಷಗಳಿಂದ ಯುಎಇ ಸರ್ಕಾರದ ಒಡೆತನದ ಕಡಿಮೆ ದರದ ವಿಮಾನಯಾನ ಸಂಸ್ಥೆ ಫ್ಲೈದುಬೈನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಅವರು ಸುಮಾರು 10 ವರ್ಷಗಳ ಕಾಲ ಸ್ಪೈಸ್‌ಜೆಟ್‌ನಲ್ಲಿ ಸೇವೆ ಸಲ್ಲಿಸಿದ್ದರು.



