ಮನೆಯಲ್ಲಿ ಬಳಸಿ ಉಳಿದಿರುವ ಅಥವಾ ಬಳಕೆಯಾಗದೆ ಉತ್ತಮ ಸ್ಥಿತಿಯಲ್ಲಿರುವ ಪಾದರಕ್ಷೆಗಳನ್ನು ಬಡ ಹಾಗೂ ಪಾದರಕ್ಷೆರಹಿತ ಮಕ್ಕಳಿಗೆ ತಲುಪಿಸುವ ಉದ್ದೇಶದಿಂದ ‘ನಡಿಗೆ’ ಸಾಮಾಜಿಕ ಅಭಿಯಾನವನ್ನು ಅ.23ರಿಂದ 25ರವರೆಗೆ ನಗರದ ಎಂಜಿಎಂ ಕಾಲೇಜಿನಲ್ಲಿ ಆಯೋಜಿಸಲಾಗಿದೆ ಎಂದು ಆಯೋಜಕ ಅವಿನಾಶ್ ಕಾಮತ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರ್ವಜನಿಕರು ತಾವು ಬಳಸಿದ ಉತ್ತಮ ಗುಣಮಟ್ಟದ ಶೂ, ಸ್ಲಿಪರ್, ರಬ್ಬರ್ ಶೂ ಹಾಗೂ ಚಪ್ಪಲಿಗಳನ್ನು ದಾನವಾಗಿ ನೀಡಬಹುದು. ಬಳಕೆಗೆ ಯೋಗ್ಯವಾಗಿರುವ ಪಾದರಕ್ಷೆಗಳನ್ನು ಸಂಗ್ರಹಿಸಿ ಅಗತ್ಯವಿರುವ ಮಕ್ಕಳಿಗೆ ತಲುಪಿಸುವುದು ಅಭಿಯಾನದ ಉದ್ದೇಶವಾಗಿದೆ ಎಂದು ತಿಳಿಸಿದರು.
ಆದರೆ ಹೀಲ್ಸ್ ಹಾಗೂ 10 ವರ್ಷದೊಳಗಿನ ಮಕ್ಕಳ ಪಾದರಕ್ಷೆಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ಆಯೋಜಕರು ತಿಳಿಸಿದ್ದಾರೆ. ದಾನ ನೀಡಲು ಇಚ್ಛಿಸುವವರು ಅ.23ರಿಂದ 25ರವರೆಗೆ ಎಂಜಿಎಂ ಕಾಲೇಜಿಗೆ ತೆರಳಿ ಪಾದರಕ್ಷೆಗಳನ್ನು ನೀಡಬಹುದಾಗಿದೆ.
ಬಳಕೆಯಾಗದೆ ಉಳಿದಿರುವ ಉತ್ತಮ ಸ್ಥಿತಿಯ ಪಾದರಕ್ಷೆಗಳನ್ನು ದಾನ ಮಾಡುವ ಮೂಲಕ ಅಗತ್ಯವಿರುವ ಮಕ್ಕಳಿಗೆ ನೆರವಾಗುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಸುಜ್ಞಾನ ಎಜುಕೇಶನಲ್ ಟ್ರಸ್ಟ್‌ನ ಕೋಶಾಧಿಕಾರಿ ಭರತ್ ಶೆಟ್ಟಿ, ಕಾರ್ಕಳ ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ಸಹ-ಸಂಸ್ಥಾಪಕ ಅಶ್ವತ್ ಎಸ್.ಎಲ್. ಸೇರಿದಂತೆ ಹಲವರು ಉಪಸ್ಥಿತರಿದ್ದರು.



