ಎಳೆಯ ವಯಸ್ಸಿನಲ್ಲೇ ಅಪರೂಪದ ಪ್ರತಿಭೆ ಪ್ರದರ್ಶಿಸಿರುವ ದಕ್ಷಿಣ ಕನ್ನಡ ಜಿಲ್ಲೆಯ ಪ್ರದ್ಯಾ ವೈ. ಕುಲಾಲ್ ಅವರು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನ ‘ಐಬಿಆರ್ ಅಚೀವರ್’ ಗೌರವಕ್ಕೆ ಪಾತ್ರರಾಗಿದ್ದಾರೆ. ಈ ಸಾಧನೆಗಾಗಿ ಸಂಸದ ಕ್ಯಾ. ಬ್ರಿಜೇಶ್ ಚೌಟ ಹಾಗೂ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರು ಒಡ್ಡೂರು ಫಾರ್ಮ್ಹೌಸ್ನ ಶಾಸಕರ ನಿವಾಸದಲ್ಲಿ ಶಾಲು ಹೊದಿಸಿ ಅಭಿನಂದಿಸಿದರು.

ಬಿ.ಸಿ.ರೋಡ್ ಸಮೀಪದ ದೈಪಲ ನಿವಾಸಿಗಳಾದ ವಿಜಯಲಕ್ಷ್ಮಿ ಮತ್ತು ಯಾದವ ದಂಪತಿಯ ಕಿರಿಯ ಪುತ್ರಿಯಾಗಿರುವ ಪ್ರದ್ಯಾ, ಎಸ್.ವಿ.ಎಸ್. ನರ್ಸರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಕೇವಲ 2 ವರ್ಷ 9 ತಿಂಗಳ ವಯಸ್ಸಿನಲ್ಲಿಯೇ ಐದು ಮಂತ್ರಗಳನ್ನು ಪಠಿಸುವುದರ ಜೊತೆಗೆ ಕನ್ನಡ ಮತ್ತು ತುಳು ಭಾಷೆಗಳಲ್ಲಿ ನಾಲ್ಕು ಭಕ್ತಿಗೀತೆಗಳನ್ನು ಹಾಡುವ ಮೂಲಕ ಗಮನಾರ್ಹ ಪ್ರತಿಭೆ ಮೆರೆದಿದ್ದಾರೆ.

ಪುಟ್ಟ ವಯಸ್ಸಿನಲ್ಲೇ ಧಾರ್ಮಿಕ ಪಠಣ ಹಾಗೂ ಭಕ್ತಿಗೀತೆಗಳ ಗಾಯನದಲ್ಲಿ ಸಾಧನೆ ಮಾಡಿರುವ ಪ್ರದ್ಯಾ ಅವರ ಪ್ರತಿಭೆಗೆ ಮೆಚ್ಚುಗೆ ವ್ಯಕ್ತವಾಗಿದ್ದು, ಅವರ ಸಾಧನೆ ಕುಟುಂಬಸ್ಥರು ಹಾಗೂ ಜಿಲ್ಲೆಯ ಜನರಲ್ಲಿ ಸಂತಸ ಮೂಡಿಸಿದೆ.



