ತುಳುನಾಡಿನ ಪ್ರಸಿದ್ಧ ಕಾರಣಿಕ ಕ್ಷೇತ್ರಗಳಲ್ಲಿ ಒಂದಾದ ಬಂಟ್ವಾಳ ತಾಲೂಕಿನ ಸಜೀಪಮೂಡ ಗ್ರಾಮದ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ಕಾವೇರಿ ಸಂಕ್ರಮಣದ ಪ್ರಯುಕ್ತ ಸಂಪ್ರದಾಯಬದ್ಧ ಪುದ್ದಾರ್ ಅಗೆಲು ಸೇವೆ ಶುಕ್ರವಾರ ನೆರವೇರಿತು.

ಕೃಷಿ ಸಂಸ್ಕೃತಿ ಮತ್ತು ದೈವಾರಾಧನೆಯೊಂದಿಗೆ ನಿಕಟ ಸಂಬಂಧ ಹೊಂದಿರುವ ಈ ವಿಶೇಷ ಆಚರಣೆಯಲ್ಲಿ ಹೊಸ ಅಕ್ಕಿಯಿಂದ ತಯಾರಿಸಿದ ಅನ್ನ ಹಾಗೂ ವಿವಿಧ ತರಕಾರಿಗಳಿಂದ ಸಿದ್ಧಪಡಿಸಿದ ಪದಾರ್ಥಗಳನ್ನು ದೈವಕ್ಕೆ ಸಮರ್ಪಿಸಲಾಯಿತು. ಪುದ್ದಾರ್ ಅಗೆಲು ಸೇವೆಯು ತುಳುನಾಡಿನ ಸಾಂಪ್ರದಾಯಿಕ ಆಚರಣೆಗಳ ಮಹತ್ವವನ್ನು ಸಾರುವ ವಿಶಿಷ್ಟ ಸೇವೆಯಾಗಿದೆ.
ಪಣೋಲಿಬೈಲು ಕ್ಷೇತ್ರದಲ್ಲಿ ಸಾಮಾನ್ಯವಾಗಿ ಮಂಗಳವಾರ, ಶುಕ್ರವಾರ ಮತ್ತು ಭಾನುವಾರ ಅಗೆಲು ಸೇವೆ ನಡೆಯುತ್ತದೆ. ಆದರೆ ಕಾವೇರಿ ಸಂಕ್ರಮಣವು ಸೋಮವಾರ ಅಥವಾ ಶನಿವಾರದಂದು ಬಂದರೆ, ಆ ದಿನಗಳಲ್ಲಿ ಅಗೆಲು ಸೇವೆ ನಡೆಸದ ಕ್ಷೇತ್ರದ ಸಂಪ್ರದಾಯದಂತೆ ದಿನಾಂಕವನ್ನು ಬದಲಾಯಿಸಿ ಸೇವೆ ನೆರವೇರಿಸಲಾಗುತ್ತದೆ.
ಈ ಬಾರಿ ಕಾವೇರಿ ಸಂಕ್ರಮಣ ಶನಿವಾರ ಬಂದ ಹಿನ್ನೆಲೆಯಲ್ಲಿ ಕ್ಷೇತ್ರದ ಸಂಪ್ರದಾಯದಂತೆ ಶುಕ್ರವಾರವೇ ಪುದ್ದಾರ್ ಅಗೆಲು ಸೇವೆ ನಡೆಸಲಾಯಿತು. ಭಕ್ತರು ಈ ವಿಶೇಷ ಸೇವೆಯಲ್ಲಿ ಭಾಗವಹಿಸಿ ದೈವದ ಆಶೀರ್ವಾದ ಪಡೆದರು.



