ಮೂಡಬಿದಿರೆ: ‘ವಿದ್ಯಾರ್ಥಿ ಜೀವನದಲ್ಲಿ ಹೆಚ್ಚುವರಿ ಕೌಶಲವನ್ನು ಕರಗತ ಮಾಡಿಕೊಳ್ಳಬೇಕು’ ಎಂದು ಬೆಂಗಳೂರು ಇನ್ಫೋಸಿಸ್ ಬಿಪಿಎಂನ ಸಹ ಉಪಾಧ್ಯಕ್ಷ ಶೇಖರ್ ಗಣೇಶನ್ ಹೇಳಿದರು.

ಇನ್ಫೋಸಿಸ್ ಬಿಪಿಎಂ ಹಮ್ಮಿಕೊಂಡ ‘ಕಲಿಕೆ ವೇಳೆ ಗಳಿಕೆ’ (ಅರ್ನ್ ವೈಲ್ ಲರ್ನ್) ಹಾಗೂ ಕರ‍್ಯಸ್ಥಳ (ವರ್ಕಸ್ಟೇಷನ್) ಸ್ಥಾಪನೆಯ ಕುರಿತ ಅಭಿವಿನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿ ಜೀವನದಲ್ಲಿ ಹೆಚ್ಚುವರಿ ಅವಧಿ ಪರಿಶ್ರಮ ಹಾಕುವುದರಿಂದ ಸ್ವಲ್ಪ ಒತ್ತಡ ಉಂಟಾಗಬಹುದು. ಆದರೆ, ಅದು ನಿಮ್ಮ ಭವಿಷ್ಯಕ್ಕೆ ಭದ್ರ ಬುನಾದಿ ಆಗುತ್ತದೆ ಎಂದರು.ವಿದ್ಯಾರ್ಥಿಗಳಿಗೆ ನಾವು 18 ತಿಂಗಳು ಅರೆಕಾಲಿಕ ಕೆಲಸ ಮಾಡಲು ಅವಕಾಶ ಕಲ್ಪಿಸುತ್ತಿದ್ದು, ಈ ಬಗ್ಗೆ ಸಂದರ್ಶನ ನಡೆಸಲಿದ್ದೇವೆ. ಈ ಯೋಜನೆಯ ಮೂಲಕ ವಿದ್ಯಾರ್ಥಿ ನೆಲೆಯಲ್ಲಿಯೆ ದುಡಿಮೆಯ ಅವಕಾಶವನ್ನು ಪಡೆಯಬಹುದು. ಇದು ವಿದ್ಯಾರ್ಥಿಯ ಭವಿಷ್ಯದ ದೃಷ್ಟಿಯಿಂದ ಕೆಲಸದ ಮೇಲಿನ ಹಿಡಿತ ಹಾಗೂ ಹಣಕಾಸಿನ ಭದ್ರತೆಗೆ ಸಹಕಾರಿ ಎಂದರು.
ನಂತರ ತಂಡದ ಸದಸ್ಯರು ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿಗೆ ಭೇಟಿ ನೀಡಿ ಇನ್ಫೋಸಿಸ್ ಬಿಪಿಎಂನ ಕರ‍್ಯಸ್ಥಾನ ತೆರೆಯುವ ಕುರಿತು ಸ್ಥಳ ಪರಿಶೀಲನೆ ಹಾಗೂ ಚರ್ಚೆ ನಡೆಸಿದರು.



