ದಕ್ಷಿಣ ಕನ್ನಡ : ಅರಬ್ಬಿ ಸಮುದ್ರದ ಕರಾವಳಿ ತೀರದ ಸಮೀಪ ಚಂಡಮಾರುತ ರೂಪುಗೊಂಡಿದ್ದು, ಕಡಲ ನಗರಿ ಮಂಗಳೂರು ಸೇರಿದಂತೆ ಕರಾವಳಿಯಲ್ಲಿ ಮಳೆಯಾಗುತ್ತಿದ್ದು, ಮೋಡ ಮುಸುಕಿದ ವಾತಾವರಣವಿದೆ, ಕಳೆದೆರಡು ದಿನಗಳಿಂದ ಕರಾವಳಿಯ ಬಹುತೇಕ ಕಡೆಗಳಲ್ಲಿ ಗುಡುಗು ಸಿಡಿಲಿನಿಂದ ಕೂಡಿದ ಮಳೆಯಾಗುತ್ತಿದ್ದು, ಕರಾವಳಿಯ ಹಲವು ಜಿಲ್ಲೆಗಳಲ್ಲಿ, ಸಿಡಿಲಿನ ಆಘಾತದಿಂದ ಹಾನಿಯಾದ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ, ಹಲವು ಮನೆ ಕೊಟ್ಟಿಗೆಗಳು ಸಿಡಿಲಿನಿಂದ ಹಾನಿಯಾಗಿವೆ, ಇಂದು ಕೂಡ ಸಂಜೆಯ ವೇಳೆಗೆ ಉತ್ತಮ ಮಳೆಯಾಗುತ್ತಿದೆ ಎಂದು ವರದಿಯಾಗಿದೆ.

ಅರಬ್ಬಿ ಸಮುದ್ರದ ಆಗ್ನೇಯ ಹಾಗೂ ಪೂರ್ವ-ಕೇಂದ್ರ ಪ್ರದೇಶದಲ್ಲಿ ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಚಂಡಮಾರುತವು ಅರಬ್ಬಿ ಸಮುದ್ರದಲ್ಲಿ ಪಶ್ಚಿಮ ಮತ್ತು ವಾಯವ್ಯ ಪ್ರದೇಶದತ್ತ ಸಾಗಿ ಮತ್ತಷ್ಟು ತೀವ್ರಗೊಳ್ಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ನಾವಿಕರು, ಮೀನುಗಾರರು ಮುನ್ನೆಚ್ಚರಿಕೆ ವಹಿಸಬೇಕು ಎಂದು ನಮ ಮಂಗಳೂರು ಬಂದರು ಪ್ರಾಧಿಕಾರ ತಿಳಿಸಿದೆ.

ಮುನ್ಸೂಚನೆಯಂತೆ ಚಂಡಮಾರುತ ಉಂಟಾಗಿದ್ದೇ ಆದರೆ ಬಂದರಿನ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸುವ ಸಾಧ್ಯತೆಯಿದ್ದು, ಹಡಗುಗಳು ಸಾಕಷ್ಟು ಮುಂಚಿತವಾಗಿ ದಡ ಸೇರುವಂತೆ ಸೂಚಿಸಲಾಗಿದೆ, ಬಂದರಿನ ಎಲ್ಲಾ ಕಾರ್ಯಾಚರಣೆಗಳು ರದ್ದಾಗುವ ಪರಿಸ್ಥಿತಿ ಉಂಟಾದರೆ ಅದನ್ನು ಎದುರಿಸಲು ಸಿದ್ಧರಾಗಿರಬೇಕು ಎಂದು ಬಂದರಿನ ಬಳಕೆದಾರರು, ಹಡಗು ಸಂಸ್ಥೆಗಳು, ಅರಬ್ಬಿ ಸಮುದ್ರಕ್ಕೆ ಹೊಂದಿಕೊಂಡಂತಿರುವ ಜಿಲ್ಲಾಡಳಿತಗಳು, ಮೀನುಗಾರಿಕಾ ಇಲಾಖೆ, ಕರಾವಳಿ ಭದ್ರತಾ ಪೊಲೀಸ್ ಹಾಗೂ ಕಸ್ಟಮ್ಸ್ ಇಲಾಖೆಗಳಿಗೆ ಮುನ್ನೆಚ್ಚರಿಕೆ ಸಂದೇಶ ರವಾನಿಸಿದೆ. ಮಾಧ್ಯಮದಲ್ಲಿ ವರದಿಯಾಗಿದೆ.



