ಮೂಡುಬಿದಿರೆ: ‘ಜೀವನದಲ್ಲಿ ಕಲಿಕೆ ನಿರಂತರ ಪ್ರಕ್ರಿಯೆ. ಪ್ರತಿ ಹಂತದ ಕಲಿಕೆ ಹೊಸದನ್ನು ಕಲಿಸುತ್ತದೆ. ಕಲಿಯುವ ಮನಸ್ಸು ನಮ್ಮದಾಗಿರಬೇಕು ಎಂದು ಖ್ಯಾತ ವೈದ್ಯ ಹಾಗೂ ಕರ್ನಾಟಕ ರೆಡ್‌ಕ್ರಾಸ್ ಸೊಸೈಟಿ ಅಧ್ಯಕ್ಷ ಡಾ. ರಾಮಚಂದ್ರ ಕೆ. ಜೋಯಿಷಿ ಹೇಳಿದರು.

ಆಳ್ವಾಸ್ ಅಲೈಡ್ ಹೆಲ್ತ್ಸೈನ್ಸ್ ಮತ್ತು ಫಿಸಿಯೋಥೆರಪಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ನರ್ಸಿಂಗ್ ಕಾಲೇಜು ಸಭಾಂಗಣದಲ್ಲಿ ಹಮ್ಮಿಕೊಂಡ ಅಭಿವಿನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಲಿಕೆ ಕೇವಲ ಪಠ್ಯಕ್ಕೆ ಸೀಮಿತವಲ್ಲ. ಅದು ವ್ಯಾಪಕ. ಅದು ಬದುಕಿನ ಕೊನೆ ತನಕದ ಕ್ರಿಯೆ. ಯಶಸ್ಸಿನ ಪಯಣದಲ್ಲಿ ಪ್ರತಿಭೆ, ಜ್ಞಾನ, ಕಠಿಣ ಪರಿಶ್ರಮ, ಆತ್ಮಸ್ಥೈರ್ಯ, ಆತ್ಮ ವಿಶ್ವಾಸ ಬಹಳ ಮುಖ್ಯ. ಬದುಕು ಹೂವಿನ ಹಾಸಿಗೆಯಲ್ಲ ಎಂದರು.
ಯಶಸ್ಸಿನಲ್ಲಿ ಬುದ್ಧಿಮತ್ತೆ ಮತ್ತು ಭಾವನಾತ್ಮಕತೆಯ ನಂಟು ಹಾಗೂ ಜ್ಞಾನದ ಬಳಕೆ ಅಗತ್ಯ. ಕೇವಲ ಬುದ್ಧಿಮತ್ತೆಯೇ ಹೆಚ್ಚಿದರೂ ಸೋಲುತ್ತೇವೆ. ಭಾವನೆಗಳ ಸ್ಪಂದನೆ ಇರಬೇಕು. ನಾವು ಏನೇ ಆದರೂ, ಪರಿಸರಕ್ಕೆ ಹೊಂದಿಕೊಳ್ಳುವ ಗುಣ ಬೆಳೆಸಿಕೊಳ್ಳಬೇಕು ಎಂದರು. ಆಳ್ವಾಸ್ ಹೆಲ್ತ್ ಸೆಂಟರ್‌ನ ಆರಂಭದ ದಿನಗಳಲ್ಲಿ ಕೆಲಸ ಮಾಡಿದ ನೆನಪನ್ನು ಹಂಚಿಕೊಂಡ ಅವರು, ಇಂದು ಈ ಹೆಲ್ತ್ ಸೆಂಟರ್ ಮೂಡುಬಿದಿರೆ ಭಾಗದ ಜನರಿಗೆ ನೀಡುತ್ತಿರುವ ಸೇವೆಯನ್ನು ಶ್ಲಾಘಿಸಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ಡಾ. ವಿನಯ್ ಆಳ್ವ ಮಾತನಾಡಿ, ‘ವೈದ್ಯಕೀಯ ಚಿಕಿತ್ಸಾ ಪದ್ಧತಿಯು ಒಂದು ರಥದ ಹಾಗೆ. ಇಲ್ಲಿ ಕೇವಲ ವೈದ್ಯರು ಮಾತ್ರವಲ್ಲ, ಎಲ್ಲರೂ ಮುಖ್ಯ. ವೈದ್ಯಕೀಯ ಹಾಗೂ ಅರೆ ವೈದ್ಯಕೀಯ ವಿಭಾಗಗಳ ಮಧ್ಯೆ ಹೋಲಿಕೆ ಸಲ್ಲದು. ನಾವು ಆಯ್ಕೆ ಮಾಡಿದ ಕೋರ್ಸ್ನಲ್ಲಿ ನಮ್ಮ ಜ್ಞಾನ ಮತ್ತು ಕೌಶಲ ಬೆಳೆಸಿಕೊಳ್ಳಬೇಕು. ಅದಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು’ ಎಂದರು.



