ಪಾಕಿಸ್ತಾನ ಮತ್ತು ಪಾಕ್ ಆಕ್ರಮಿ ಕಾಶ್ಮೀರದಲ್ಲಿ ಉಗ್ರ ನೆಲೆಯನ್ನು ಗುರಿಯಾಗಿಸಿ ಸೇನೆ ನಡೆಸಿದ ಆಪರೇಷನ್ ಸಿಂದೂರ್ ಬಳಿಕ ಮಾಧ್ಯಮಗೋಷ್ಠಿಗಳಲ್ಲಿ ಪ್ರಮುಖವಾಗಿ ಕಾಣಿಸಿಕೊಂಡ ಕರ್ನಲ್ ಸೋಫಿಯಾ ಖುರೇಷಿ ಬಗ್ಗೆ ಮಧ್ಯಪ್ರದೇಶದ ಸಚಿವರೊಬ್ಬರು ನಾಲಿಗೆ ಹರಿಬಿಟ್ಟು ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಆಪರೇಷನ್ ಸಿಂದೂರ್, ಪಹಲ್ಗಾಮ್ ದಾಳಿ ಬಗ್ಗೆ ಮಾತನಾಡುತ್ತಾ ಸಚಿವ ಕುನ್ವರ್ ವಿಜಯ್ ಶಾ ಸೋಫಿಯಾ ಖುರೇಷಿ ಬಗ್ಗೆ ಆಕ್ಷೇಪನಾರ್ಹ ಹೇಳಿಕೆ ನೀಡಿದ್ದಾರೆ. ಸೋಫಿಯಾ ಖುರೇಷಿಯನ್ನು ಭಯೋತ್ಪಾದಕ ಸಹೋದರಿ ಎಂದು ಕರೆಯುವ ಮೂಲಕ ಭಾರೀ ವಿವಾದಕ್ಕೀಡಾಗಿದ್ದಾರೆ. ಅವರ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದ್ದು, ಪ್ರತಿಪಕ್ಷಗಳು ಕಿಡಿಕಾರಿವೆ.
ಮಹೌನಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ವಿಜಯ್ ಶಾ, ಉಗ್ರರು ಭೀಕರ ದಾಳಿ ಮಾಡುವ ಮೂಲಕ ನಮ್ಮ ಹೆಣ್ಣು ಮಕ್ಕಳ ಕುಂಕುಮ ಅಳಿಸಿದ್ದರು. ನಾವು ಅವರ ಸಹೋದರಿಯನ್ನೇ ಪಾಠ ಕಲಿಸು ಕಳುಹಿಸಿದೆವು. ಅವರು ಹಿಂದೂಗಳನ್ನು ವಿವಸ್ತ್ರಗೊಳಿಸಿ ಕೊಂದರು. ಇದಕ್ಕೆ ಪ್ರತಿಯಾಗಿ ಮೋದಿ ಜಿ ಅವರ ಸಹೋದರಿಯನ್ನೇ ಕಳುಹಿಸಿದರು. ನಮ್ಮ ಸಮುದಾಯದ ಸಹೋದರಿಯರನ್ನು ವಿಧವೆಯರನ್ನಾಗಿ ಮಾಡಿದರೆ, ನಿಮ್ಮ ಸಮುದಾಯದ ಸಹೋದರಿ ನಿಮ್ಮನ್ನು ವಿವಸ್ತ್ರಗೊಳಿಸುತ್ತಾರೆ ಎಂಬ ಸಂದೇಶವನ್ನು ಕಳುಹಿಸಲು ಮೋದಿ ಉಗ್ರರ ಸಮುದಾಯದ ಸಹೋದರಿಯನ್ನೇ ಕಳುಹಿಸಿದ್ದಾರೆ. ಇನ್ನು ಈ ಕಾರ್ಯಕ್ರಮದಲ್ಲಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸಾವಿತ್ರಿ ಠಾಕೂರ್ ಸೇರಿದಂತೆ ಹಲವಾರು ಪ್ರಮುಖ ಬಿಜೆಪಿ ನಾಯಕರು ವೇದಿಕೆಯಲ್ಲಿದ್ದರು ಎಂದು ವರದಿಗಳು ತಿಳಿಸಿವೆ.



