ಕ್ರಿಕೆಟ್ ಪ್ರೇಮಿಗಳಿಗೆ ಕ್ರೀಡಾಂಗಣದ ಅನುಭವವನ್ನು ನೀಡುವ ನಿಟ್ಟಿನಲ್ಲಿ ಮಂಗಳೂರಿನಲ್ಲಿ ಬಿಸಿಸಿಐ ವತಿಯಿಂದ ‘ಟಾಟಾ ಐಪಿಎಲ್ ಫ್ಯಾನ್ ಪಾರ್ಕ್’ ಆಯೋಜಿಸಲಾಗಿದೆ ಎಂದು ಬಿಸಿಸಿಐ ಪ್ರತಿನಿಧಿ ವಿಕಾಸ್ ಪಂಡಿತ್ ತಿಳಿಸಿದ್ದಾರೆ.

ಮಂಗಳೂರು ನಗರದ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ಐಪಿಎಲ್ ಪಂದ್ಯಗಳ ರೋಚಕತೆಯನ್ನು ಕರಾವಳಿಯ ಜನತೆಗೆ ಉಚಿತವಾಗಿ ತಲುಪಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ನಗರದ ಲಾಲ್‌ಬಾಗ್‌ನಲ್ಲಿರುವ ‘ಕರಾವಳಿ ಉತ್ಸವ ಮೈದಾನ’ದಲ್ಲಿ ಈ ಫ್ಯಾನ್ ಪಾರ್ಕ್ ನಿರ್ಮಾಣವಾಗಲಿದೆ. ಮೇ 29 ರಂದು ನಡೆಯಲಿರುವ ಪಂದ್ಯ ಹಾಗೂ ಮೇ 31 ರಂದು ನಡೆಯಲಿರುವ ಐಪಿಎಲ್ ಫೈನಲ್ ಪಂದ್ಯವನ್ನು ಬೃಹತ್ ಪರದೆಗಳ ಮೂಲಕ ನೇರ ಪ್ರಸಾರ ಮಾಡಲಾಗುವುದು. ಎರಡೂ ದಿನಗಳೂ ಸಂಜೆ 5.30 ರಿಂದ ಸಾರ್ವಜನಿಕರಿಗೆ ಮೈದಾನದೊಳಗೆ ಪ್ರವೇಶ ಮುಕ್ತವಾಗಿರುತ್ತದೆ ಎಂದವರು ತಿಳಿಸಿದ್ದಾರೆ.



