ಮಂಗಳೂರು ಮತ್ತು ಉಡುಪಿ ಸೇರಿದಂತೆ ಕರಾವಳಿ ಕರ್ನಾಟಕ ಭಾಗದಲ್ಲಿ ಕರ್ನಾಟಕ ಹೈಕೋರ್ಟ್ನ ಸರ್ಕ್ಯೂಟ್ ಬೆಂಚ್ ಅಥವಾ ಶಾಶ್ವತ ಪೀಠ ಸ್ಥಾಪಿಸುವ ಸಾಧ್ಯತೆಯನ್ನು ಪರಿಶೀಲಿಸಲು ಕರ್ನಾಟಕ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳು ಮೂವರು ನ್ಯಾಯಮೂರ್ತಿಗಳ ಸಮಿತಿಯನ್ನು ರಚಿಸಿದ್ದಾರೆ.

ಹೈಕೋರ್ಟ್ನ ಈ ನಿರ್ಧಾರವನ್ನು ಮಂಗಳೂರು ವಕೀಲರ ಸಂಘ ಹೃತ್ಪೂರ್ವಕವಾಗಿ ಸ್ವಾಗತಿಸುತ್ತದೆ ಎಂದು ಸಂಘದ ಅಧ್ಯಕ್ಷ ಜಗದೀಶ್ ಕೆ. ಶೇಣವ ತಿಳಿಸಿದ್ದಾರೆ.
ಮಂಗಳೂರು ಸೇರಿದಂತೆ ಕರಾವಳಿ ಭಾಗದ ಜನರು ಹೈಕೋರ್ಟ್ನ ನ್ಯಾಯಾಂಗ ಸೇವೆಗಾಗಿ ಬೆಂಗಳೂರಿಗೆ ತೆರಳಬೇಕಾಗಿರುವುದರಿಂದ, ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯಾದರೆ ಈ ಭಾಗದ ಜನರಿಗೆ ನ್ಯಾಯದ ಲಭ್ಯತೆ ಮತ್ತಷ್ಟು ಸುಲಭವಾಗಲಿದೆ. ಜತೆಗೆ ಸಮಯ ಹಾಗೂ ಆರ್ಥಿಕ ವೆಚ್ಚವೂ ಕಡಿಮೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗಾಗಿ ಹಲವು ವರ್ಷಗಳಿಂದ ನಡೆಯುತ್ತಿರುವ ಪ್ರಯತ್ನಗಳಿಗೆ ಹೈಕೋರ್ಟ್ನ ಇಂದಿನ ಅಧಿಸೂಚನೆಯು ಮಹತ್ವದ ಹೆಜ್ಜೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಸಮಿತಿಯು ಸಂಬಂಧಪಟ್ಟ ಎಲ್ಲ ಹಿತಾಸಕ್ತಿದಾರರೊಂದಿಗೆ ಸಮಾಲೋಚನೆ ನಡೆಸಿ ವರದಿ ಸಲ್ಲಿಸಲಿದೆ. ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯಾಗುವ ನಿಟ್ಟಿನಲ್ಲಿ ಮಂಗಳೂರು ವಕೀಲರ ಸಂಘವು ಮುಂದೆಯೂ ಅಗತ್ಯ ಸಹಕಾರ ಹಾಗೂ ರಚನಾತ್ಮಕ ಪ್ರಯತ್ನಗಳನ್ನು ಮುಂದುವರಿಸಲಿದೆ ಎಂದು ಜಗದೀಶ್ ಕೆ. ಶೇಣವ ತಿಳಿಸಿದ್ದಾರೆ.



