ಉಡುಪಿ ನಗರದ ಹನುಮಾನ್ ಪೆಟ್ರೋಲ್ ಬಂಕ್ ಹಿಂಭಾಗ ನಿಲ್ಲಿಸಿದ್ದ ಶ್ರೀ ದುರ್ಗಾಂಬ ಬಸ್ವೊಂದು ಕಳವಾಗಿರುವ ಘಟನೆ ಸೆ.29ರಂದು ಬೆಳಕಿಗೆ ಬಂದಿದ್ದು, ಕಳವಾದ ಬಸ್ ಅನ್ನು ಪೊಲೀಸರು ಮುದುರಂಗಡಿ ಸಮೀಪದ ಮುದ್ದಾಡಿ ಹಾಡಿಯಲ್ಲಿ ಪತ್ತೆಹಚ್ಚಿ ವಶಕ್ಕೆ ಪಡೆದಿದ್ದಾರೆ.

ಕಟ್ಬೆಳ್ತೂರು ನಿವಾಸಿ ಕೃಷ್ಣ ಅವರು ನೀಡಿದ ದೂರಿನಂತೆ, ಅವರು ಕೆಎ 20 ಎಡಿ 1931 ನೋಂದಣಿ ಸಂಖ್ಯೆಯ ಶ್ರೀ ದುರ್ಗಾಂಬ ಬಸ್ನ ನಿರ್ವಾಹಕರಾಗಿದ್ದಾರೆ. ಸೆ.28ರಂದು ರಾತ್ರಿ 9.48ರ ಸುಮಾರಿಗೆ ಚಾಲಕ ರಾಹೀಜ್ ಉಚ್ಚಿಲ ಅವರೊಂದಿಗೆ ಹನುಮಾನ್ ಪೆಟ್ರೋಲ್ ಬಂಕ್ ಹಿಂಭಾಗ ಬಸ್ ನಿಲ್ಲಿಸಿದ್ದರು. ಬಳಿಕ ರಾತ್ರಿ 10 ಗಂಟೆ ಸುಮಾರಿಗೆ ಇಬ್ಬರೂ ಸ್ಕೂಟರ್ನಲ್ಲಿ ತೆರಳಿದ್ದರು.
ಮರುದಿನ ಬೆಳಗ್ಗೆ ಎಂದಿನಂತೆ ಬಸ್ ನಿಲ್ಲಿಸಿದ್ದ ಸ್ಥಳಕ್ಕೆ ಬಂದಾಗ ಬಸ್ ಕಾಣೆಯಾಗಿರುವುದು ಗಮನಕ್ಕೆ ಬಂದಿದೆ. ಇಬ್ಬರು ಅಪರಿಚಿತರು ದ್ವಿಚಕ್ರ ವಾಹನದಲ್ಲಿ ಬಂದು ಬಸ್ ಕಳವು ಮಾಡಿಕೊಂಡು ಹೋಗಿರುವ ಶಂಕೆ ವ್ಯಕ್ತಪಡಿಸಲಾಗಿದ್ದು, ಬಸ್ನ ಅಂದಾಜು ಮೌಲ್ಯ ಸುಮಾರು 40 ಲಕ್ಷ ರೂ. ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಕಳವಾದ ಬಸ್ಗಾಗಿ ಶೋಧ ನಡೆಸುತ್ತಿದ್ದ ವೇಳೆ ಸೆ.29ರ ಮುಂಜಾನೆ ಸುಮಾರು 2 ಗಂಟೆಗೆ ಇಬ್ಬರು ಅಪರಿಚಿತರು ಸ್ಕೂಟರ್ನಲ್ಲಿ ಚಿಟ್ಪಾಡಿಯ ಹನುಮಾನ್ ಗ್ಯಾರೇಜ್ಗೆ ಬಂದಿರುವ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ.
ಈ ಸುಳಿವಿನ ಆಧಾರದ ಮೇಲೆ ತನಿಖೆ ಮುಂದುವರಿಸಿದ ಪೊಲೀಸರು, ಕಳವು ಮಾಡಲಾಗಿದ್ದ ಬಸ್ ಅನ್ನು ಮುದುರಂಗಡಿ ಸಮೀಪದ ಮುದ್ದಾಡಿ ಹಾಡಿಯಲ್ಲಿ ಬಿಟ್ಟು ಹೋಗಿರುವುದನ್ನು ಪತ್ತೆಹಚ್ಚಿದ್ದಾರೆ. ಬಳಿಕ ಬಸ್ ಅನ್ನು ವಶಕ್ಕೆ ಪಡೆದಿದ್ದು, ಆರೋಪಿಗಳ ಪತ್ತೆಗೆ ತನಿಖೆ ಮುಂದುವರಿದಿದೆ.



