ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಅಡೆಂಜ ಪ್ರದೇಶದ ಕಟ್ಟಡವೊಂದರಲ್ಲಿ ಭಾರತೀಯ ಕರೆನ್ಸಿಯಂತೆ ಕಾಣುವ ನೋಟುಗಳನ್ನು ಮುದ್ರಿಸಲಾಗುತ್ತಿದೆ ಎಂಬ ಮಾಹಿತಿಯ ಮೇರೆಗೆ ಉಪ್ಪಿನಂಗಡಿ ಪೊಲೀಸರು ದಾಳಿ ನಡೆಸಿ ಏಳು ಮಂದಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

ಉಪ್ಪಿನಂಗಡಿ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಸುತೇಶ್ ಕೆ.ಪಿ. ನೇತೃತ್ವದಲ್ಲಿ ಜುಲೈ 16ರಂದು ಬೆಳಿಗ್ಗೆ ನಡೆದ ಕಾರ್ಯಾಚರಣೆಯಲ್ಲಿ ಇಬ್ರಾಹಿಂ, ಶರೀಪ್, ಸಂದೀಪ್ ಪುಂಡಲಿಕ ಶೋಳಂಬಿ, ಮಹಮ್ಮದ್ ನಬಾಸ್, ಸಲ್ಮಾನ್ ಫಾರೀಸ್, ಸಿರಾಜುದ್ದೀನ್ ಹಾಗೂ ಇರ್ಷಾದ್ ಅವರನ್ನು ವಶಕ್ಕೆ ಪಡೆಯಲಾಗಿದೆ. ದಾಳಿಯ ವೇಳೆ 500 ಮುಖಬೆಲೆಯ ಒಂದು ನೋಟು, 500 ಮುಖಬೆಲೆಯ ನೋಟುಗಳ ಮಾದರಿಯಂತೆ ಮುದ್ರಿತವಾಗಿದ್ದ 21 ಎ-4 ಗಾತ್ರದ ಹಾಳೆಗಳು, ಕಂಪ್ಯೂಟರ್, ಝೆರಾಕ್ಸ್ ಯಂತ್ರ, ಸೀಲ್ಗಳು ಸೇರಿದಂತೆ ಪ್ರಕರಣಕ್ಕೆ ಸಂಬಂಧಿಸಿದ ವಿವಿಧ ಉಪಕರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 103/2026ರಡಿ ಭಾರತೀಯ ನ್ಯಾಯ ಸಂಹಿತೆ -2023ರ ಕಲಂ 178 ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.



