ಫಿಫಾ ವಿಶ್ವಕಪ್ 2026ರ ಫೈನಲ್ ಹಾಗೂ ಸೆಮಿಫೈನಲ್ ಪಂದ್ಯಗಳ ವೇಳೆ ನಡೆದ ಗಲಾಟೆ ಮತ್ತು ನಿಯಮ ಉಲ್ಲಂಘನೆಗಳ ಹಿನ್ನೆಲೆಯಲ್ಲಿ, ಅರ್ಜೆಂಟೀನಾ ಫುಟ್‌ಬಾಲ್ ಸಂಸ್ಥೆ ಹಾಗೂ ಹಲವು ಆಟಗಾರರ ವಿರುದ್ಧ ಫಿಫಾ ಶಿಸ್ತು ಕ್ರಮ ಆರಂಭಿಸಿದೆ.

ಸ್ಪೇನ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಸೋಲಿನ ಬಳಿಕ ಮೈದಾನದಲ್ಲೇ ಆಟಗಾರರ ನಡುವೆ ಭಾರಿ ವಾಗ್ವಾದ ಮತ್ತು ತಳ್ಳಾಟ ನಡೆದಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಲಿಯಾಂಡ್ರೊ ಪರೇಡೆಸ್, ನಾಹ್ಯುಯೆಲ್ ಮೊಲಿನಾ, ಥಿಯಾಗೊ ಅಲ್ಮಾಡಾ ಸೇರಿದಂತೆ ಹಲವು ಆಟಗಾರರ ವಿರುದ್ಧ ಪ್ರಕರಣ ದಾಖಲಾಗಿದೆ.
ಸಹಾಯಕ ಕೋಚ್ ರೋಬರ್ಟೊ ಅಯಾಲಾ ವಿರುದ್ಧವೂ ಕ್ರಮಕ್ಕೆ ಮುಂದಾಗಿದೆ. ಇದರ ಜೊತೆಗೆ, ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಬಳಿಕ ಅರ್ಜೆಂಟೀನಾ ಆಟಗಾರರು “ಲಾಸ್ ಮಾಲ್ವಿನಾಸ್ ಸನ್ ಅರ್ಜೆಂಟೀನಾಸ್” ಎಂಬ ರಾಜಕೀಯ ಸಂದೇಶವಿರುವ ಬ್ಯಾನರ್ ಪ್ರದರ್ಶಿಸಿದ್ದು ಕೂಡ ಫಿಫಾ ತನಿಖೆಗೆ ಕಾರಣವಾಗಿದೆ.
ಕ್ರೀಡಾಂಗಣದಲ್ಲಿ ರಾಜಕೀಯ ಸಂದೇಶಗಳನ್ನು ಪ್ರದರ್ಶಿಸುವುದು ಫಿಫಾ ನಿಯಮಗಳಿಗೆ ವಿರುದ್ಧವಾಗಿದೆ. ಅಷ್ಟೇ ಅಲ್ಲ, ಅರ್ಜೆಂಟೀನಾ ಫುಟ್‌ಬಾಲ್ ಸಂಸ್ಥೆ ವಿರುದ್ಧವೂ ಅಭಿಮಾನಿಗಳ ದುರ್ವರ್ತನೆ, ಜನಾಂಗೀಯ ನಿಂದನೆ, ಮೈದಾನಕ್ಕೆ ವಸ್ತು ಎಸೆದ ಆರೋಪ ಹಾಗೂ ಪಂದ್ಯವನ್ನು ತಡವಾಗಿ ಆರಂಭಿಸಿದ ಆರೋಪಗಳಡಿ ಪ್ರಕರಣ ದಾಖಲಾಗಿದೆ.
ಈ ಎಲ್ಲ ಪ್ರಕರಣಗಳ ವಿಚಾರಣೆ ಬಳಿಕ, ಅರ್ಜೆಂಟೀನಾ ಆಟಗಾರರು ಹಾಗೂ ಫುಟ್‌ಬಾಲ್ ಸಂಸ್ಥೆಗೆ ದಂಡ, ಅಮಾನತು ಅಥವಾ ಇತರೆ ಕಠಿಣ ಶಿಸ್ತು ಕ್ರಮ ವಿಧಿಸುವ ಸಾಧ್ಯತೆ ಇದೆ.



