ಮಳೆ ಸುರಿದರೆ ಸಾಕು, ಬಂಟ್ವಾಳ ತಾಲೂಕಿನ ಮಾಣಿ ಸಮೀಪದ ಪೆರಾಜೆ ಗ್ರಾಮದ ಜೋಗಿಬೆಟ್ಟು ರಸ್ತೆಯಲ್ಲಿ ಸಂಚಾರ ದುಸ್ತರವಾಗುತ್ತಿದೆ.

ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಈ ರಸ್ತೆಯಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗಲು ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಪ್ರತೀ ಮಳೆಯ ಸಂದರ್ಭ ರಸ್ತೆಯಲ್ಲೇ ನೀರು ನಿಂತು ಕೃತಕ ನೆರೆ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಮಳೆ ನೀರು ರಸ್ತೆಯ ಮೇಲೆ ಹರಡಿ ನಿಲ್ಲುವುದರಿಂದ ದ್ವಿಚಕ್ರ ವಾಹನ ಸವಾರರು, ಪಾದಚಾರಿಗಳು ಹಾಗೂ ಸ್ಥಳೀಯ ನಿವಾಸಿಗಳು ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು, ವೃದ್ಧರು ಹಾಗೂ ಮಹಿಳೆಯರು ಈ ರಸ್ತೆಯಲ್ಲಿ ಸಂಚರಿಸಲು ಪರದಾಡುವಂತಾಗಿದ್ದು, ಸ್ವಲ್ಪ ಮಳೆ ಬಂದರೂ ರಸ್ತೆ ಸಂಪೂರ್ಣ ಜಲಾವೃತವಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಸ್ಥಳೀಯರ ಪ್ರಕಾರ, ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೇಳೆ ಸಮರ್ಪಕ ನೀರು ಹರಿವಿನ ವ್ಯವಸ್ಥೆ ಕಲ್ಪಿಸದಿರುವುದು ಈ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ. ಹೆದ್ದಾರಿಯ ಮಳೆ ನೀರು ಜೋಗಿಬೆಟ್ಟು ರಸ್ತೆಯತ್ತ ಹರಿದು ಬಂದು ರಸ್ತೆಯಲ್ಲೇ ನಿಂತುಕೊಳ್ಳುವುದರಿಂದ ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗುತ್ತಿದೆ. ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಇದುವರೆಗೆ ಶಾಶ್ವತ ಪರಿಹಾರ ದೊರೆತಿಲ್ಲ ಎಂಬುದು ಸ್ಥಳೀಯರ ಆರೋಪವಾಗಿದೆ.



