ತೊಕ್ಕೊಟ್ಟು ವಿನಮ್ರ ಬಾರ್ ಬಳಿ ತಲವಾರು ಬೀಸಿ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದ ಆರೋಪದ ಮೇಲೆ ರೌಡಿಶೀಟರ್ವೊಬ್ಬನನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಉಳ್ಳಾಲದ ಮರ್ಗತಲೆ ನಿವಾಸಿ ಮೊಹಮ್ಮದ್ ಶಾಕಿರ್ ಎಂದು ಗುರುತಿಸಲಾಗಿದೆ. ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ಶಾಕಿರ್ ರೌಡಿಶೀಟರ್ ಆಗಿದ್ದಾನೆ ಎನ್ನಲಾಗಿದೆ. ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮದ್ಯಪಾನ ಮಾಡಿದ್ದ ಶಾಕಿರ್ ತಲವಾರು ಹಿಡಿದು ಬಾರ್ ಬಳಿ ಬಂದು ಸಾರ್ವಜನಿಕರಿಗೆ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾರ್ ಬಳಿ ತಲವಾರು ಬೀಸುತ್ತಾ, “ನಿನಗೆ ಇಷ್ಟು ಹೊತ್ತು ಓಪನ್ ಇಡಲು ಪರ್ಮಿಷನ್ ಕೊಟ್ಟದ್ದು ಯಾರು? ಬಂದ್ ಮಾಡು” ಎಂದು ತುಳು ಭಾಷೆಯಲ್ಲಿ ಹೇಳಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ತಲವಾರು ಬೀಸಿದ ಪರಿಣಾಮ ಬಾರ್ನಲ್ಲಿದ್ದವರು ಭಯಭೀತರಾಗಿ ಆಚೀಚೆ ಓಡಿದ್ದು, ಕೆಲಕಾಲ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಶಾಕಿರ್ನನ್ನು ಬಂಧಿಸಿರುವ ಪೊಲೀಸರು, ಕೃತ್ಯಕ್ಕೆ ಬಳಸಿದ್ದ ತಲವಾರನ್ನೂ ವಶಪಡಿಸಿಕೊಂಡಿದ್ದಾರೆ. ಪ್ರಕರಣದಲ್ಲಿ ಮತ್ತೋರ್ವ ಆರೋಪಿ ಮಂಚಿಲ ನಿವಾಸಿ ಅಶ್ಪಾಕ್ ಎಂಬಾತನನ್ನೂ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಶಸ್ತ್ರಾಸ್ತ್ರ ಕಾಯ್ದೆ ಸೇರಿದಂತೆ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಉಳ್ಳಾಲ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



