ಸಾಂಬಾರಿನಲ್ಲಿ ಜಿರಳೆ ಪತ್ತೆಯಾಗಿದೆ ಎಂದು ಗ್ರಾಹಕರೊಬ್ಬರು ದೂರು ನೀಡಿದ ಹಿನ್ನೆಲೆಯಲ್ಲಿ ಜಿಲ್ಲಾ ಆಹಾರ ಸುರಕ್ಷತಾ ಅಂಕಿತ ಅಧಿಕಾರಿ ಡಾ. ಪ್ರವೀಣ್ ಕುಮಾರ್ ಅವರು ತೊಕ್ಕೊಟ್ಟುವಿನ ವೃಂದಾವನ ಹೊಟೇಲಿಗೆ ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

ಮಧ್ಯಾಹ್ನ ಸುಮಾರು 1.30ರ ವೇಳೆಗೆ ಹೊಟೇಲಿಗೆ ಭೇಟಿ ನೀಡಿದ ಅಧಿಕಾರಿ ಹಾಗೂ ಸಿಬ್ಬಂದಿ ಅಡುಗೆ ಕೋಣೆಯನ್ನು ಪರಿಶೀಲಿಸಿದ್ದಾರೆ. ಈ ವೇಳೆ ಹೊಟೇಲ್ನಲ್ಲಿ ಶುಚಿತ್ವದ ಕೊರತೆ ಕಂಡುಬಂದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಅಡುಗೆ ಕೋಣೆಯಲ್ಲಿ ಆಹಾರ ಪದಾರ್ಥಗಳನ್ನು ದಾಸ್ತಾನು ಮಾಡಲು ಪ್ರತ್ಯೇಕ ಕೊಠಡಿ ವ್ಯವಸ್ಥೆ ಇರಲಿಲ್ಲ. ಅಲ್ಲದೆ, ಆಹಾರ ಸಾಮಗ್ರಿಗಳನ್ನು ಎಲ್ಲೆಂದರಲ್ಲಿ ರಾಶಿ ಹಾಕಿರುವುದು ಪರಿಶೀಲನೆ ವೇಳೆ ಕಂಡುಬಂದಿದೆ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಅಡುಗೆ ಕೋಣೆಯಲ್ಲಿದ್ದ ಆಹಾರ ಪದಾರ್ಥಗಳನ್ನು ತೆರವುಗೊಳಿಸಿ, ಕೋಣೆಯನ್ನು ಸ್ವಚ್ಛಗೊಳಿಸಲಾಗಿದೆ. ಆಹಾರ ಪದಾರ್ಥಗಳನ್ನು ಪ್ರತ್ಯೇಕವಾಗಿ ಹಾಗೂ ಸುರಕ್ಷಿತ ರೀತಿಯಲ್ಲಿ ಜೋಡಿಸಿಡುವಂತೆ ಹೊಟೇಲ್ ಮಾಲಕರಿಗೆ ಸೂಚನೆ ನೀಡಲಾಗಿದೆ.
ಗ್ರಾಹಕರ ದೂರಿನ ಆಧಾರದ ಮೇಲೆ ತಪಾಸಣೆ ನಡೆಸಲಾಗಿದ್ದು, ಹೊಟೇಲ್ನಲ್ಲಿ ಶುಚಿತ್ವ ಕಾಪಾಡದಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಮಾಲಕರಿಗೆ ನೋಟಿಸ್ ನೀಡಲಾಗಿದೆ ಎಂದು ಡಾ. ಪ್ರವೀಣ್ ಕುಮಾರ್ ತಿಳಿಸಿದ್ದಾರೆ.
ಅಲ್ಲದೆ, ಪ್ರಕರಣವನ್ನು ಎಡಿಸಿ ನ್ಯಾಯಾಲಯದಲ್ಲಿ ದಾಖಲಿಸುವುದಾಗಿ ಅವರು ಮಾಹಿತಿ ನೀಡಿದ್ದಾರೆ.



