ಗಂಗೊಳ್ಳಿ ಧಕ್ಕೆಯಿಂದ ಮೀನುಗಾರಿಕೆಗೆ ತೆರಳಿದ್ದ ಪರ್ಶಿನ್ ಮೀನುಗಾರಿಕಾ ಬೋಟ್ವೊಂದು ಧಕ್ಕೆಯ ಅನತಿ ದೂರದಲ್ಲೇ ಸಮುದ್ರದಲ್ಲಿ ಮುಳುಗಡೆಯಾದ ಘಟನೆ ನಡೆದಿದೆ.

‘ಶ್ರೀ ಬಾಲಾಂಜನೇಯ’ ಹೆಸರಿನ ಪರ್ಶಿನ್ ಬೋಟ್ ಮಧ್ಯಾಹ್ನದ ಬಳಿಕ ಮೀನುಗಾರಿಕೆಗೆ ತೆರಳಿತ್ತು. ಗಂಗೊಳ್ಳಿ ಅಳಿವೆಯ ಸಮೀಪ ಸಮುದ್ರದಲ್ಲಿ ಸಾಗುತ್ತಿದ್ದ ವೇಳೆ ಏಕಾಏಕಿ ಬೋಟ್ ಮುಳುಗಲು ಆರಂಭಿಸಿದೆ.
ಬೋಟ್ ಮುಳುಗುತ್ತಿರುವುದನ್ನು ಗಮನಿಸಿದ ಸಮೀಪದಲ್ಲಿದ್ದ ಇತರ ಮೀನುಗಾರಿಕಾ ಬೋಟ್ಗಳ ಮೀನುಗಾರರು ತಕ್ಷಣ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಕರಾವಳಿ ಕಾವಲು ಪಡೆಯ ಸಿಬ್ಬಂದಿಯೂ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.

ಬೋಟ್ನಲ್ಲಿದ್ದ 27 ಮಂದಿ ಮೀನುಗಾರರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಬೋಟ್ನ ತಳಭಾಗದ ಹಲಗೆಗಳು ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದರಿಂದ ಒಳಗೆ ಭಾರೀ ಪ್ರಮಾಣದಲ್ಲಿ ನೀರು ನುಗ್ಗಿ ಬೋಟ್ ತ್ವರಿತವಾಗಿ ಮುಳುಗಿದೆ ಎನ್ನಲಾಗಿದೆ.
ಘಟನೆಯಿಂದ ‘ಶ್ರೀ ಬಾಲಾಂಜನೇಯ’ ಪರ್ಶಿನ್ ಬೋಟ್ಗೆ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ ಎಂದು ತಿಳಿದುಬಂದಿದೆ.



