ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿದ್ದ ಮಾಡೂರು ಯೂಸುಫ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳಿಗೆ ಮಂಗಳೂರಿನ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಗುರುವಾರ ಜೀವಾವಧಿ ಜೈಲು ಶಿಕ್ಷೆ ವಿಧಿಸಿದೆ. ಅಲ್ಲದೆ, ಆರೋಪಿಗಳಿಗೆ ತಲಾ ₹76 ಸಾವಿರ ದಂಡವನ್ನೂ ವಿಧಿಸಿ ನ್ಯಾಯಾಧೀಶ ಜಗದೀಶ್ ವಿ.ಎನ್. ಅವರು ತೀರ್ಪು ಪ್ರಕಟಿಸಿದ್ದಾರೆ.

ಲಿತೇಶ್ ಪೂಜಾರಿ, ಶೋಭರಾಜ್, ಯುವರಾಜ್, ಪ್ರದೀಪ್ ಹಾಗೂ ಉಮೇಶ್ ಕೊಂಬಾರು ಜೀವಾವಧಿ ಶಿಕ್ಷೆಗೆ ಗುರಿಯಾದ ಆರೋಪಿಗಳು.
2026ರ ಜನವರಿ 28ರಂದು ಬರ್ಕೆ ಪೊಲೀಸ್ ಠಾಣಾ ವ್ಯಾಪ್ತಿಯ ಮಂಗಳೂರು ಜಿಲ್ಲಾ ಕಾರಾಗೃಹದೊಳಗೆ ರೌಡಿಶೀಟರ್ ಮಾಡೂರು ಯೂಸುಫ್ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಹತ್ಯೆ ಮಾಡಲಾಗಿತ್ತು. ಘಟನೆ ಬಳಿಕ ಪ್ರಕರಣವು ಭಾರಿ ಗಮನ ಸೆಳೆದಿತ್ತು.
ಈ ಸಂಬಂಧ ಬರ್ಕೆ ಪೊಲೀಸ್ ಠಾಣೆಯಲ್ಲಿ ಲಿತೇಶ್ ಪೂಜಾರಿ, ಶೋಭರಾಜ್, ಯುವರಾಜ್, ಪ್ರದೀಪ್, ಉಮೇಶ್ ಕೊಂಬಾರು, ಶರಣ್ ಪೂಜಾರಿ, ಮಹೇಶ್ ಕುಮಾರ್, ಕಮಲಾಕ್ಷ ಪೂಜಾರಿ, ಸತೀಶ್ ಪೂಜಾರಿ ಹಾಗೂ ಲತೀಶ್ ಸೇರಿದಂತೆ ಒಟ್ಟು 10 ಮಂದಿ ವಿರುದ್ಧ ಎಫ್ಐಆರ್ ದಾಖಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ ಅಂದಿನ ಎಸಿಪಿ ತಿಲಕಚಂದ್ರ ಅವರು ಸಮಗ್ರ ತನಿಖೆ ಬಳಿಕ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ಪೂರ್ಣಗೊಂಡ ಬಳಿಕ ನ್ಯಾಯಾಲಯವು ಐವರು ಆರೋಪಿಗಳನ್ನು ದೋಷಿಗಳೆಂದು ಪರಿಗಣಿಸಿ ಜೀವಾವಧಿ ಶಿಕ್ಷೆ ಹಾಗೂ ತಲಾ ₹76 ಸಾವಿರ ದಂಡ ವಿಧಿಸಿದೆ.



