ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆಯುತ್ತಿರುವ ಐದನೇ ವರ್ಷದ ಉಡುಪಿ ಉಚ್ಚಿಲ ದಸರಾ–2026ರ ಅಂಗವಾಗಿ ಕೈಗೊಂಡಿರುವ ವಿದ್ಯುತ್ ದೀಪಾಲಂಕಾರ ಭಕ್ತರು ಹಾಗೂ ಸಾರ್ವಜನಿಕರ ಗಮನ ಸೆಳೆಯುತ್ತಿದೆ. ರಾಷ್ಟ್ರೀಯ ಹೆದ್ದಾರಿ 66ರ ಇಕ್ಕೆಲಗಳಲ್ಲಿ ಸುಮಾರು 11 ಕಿ.ಮೀ. ಉದ್ದಕ್ಕೂ ಅಳವಡಿಸಿರುವ ಆಕರ್ಷಕ ದೀಪಗಳು ಕರಾವಳಿಯ ದಸರಾ ಸಂಭ್ರಮಕ್ಕೆ ವಿಶೇಷ ಮೆರುಗು ನೀಡಿವೆ.

ಉಚ್ಚಿಲದಿಂದ ಪಡುಬಿದ್ರಿಯವರೆಗೆ, ಅಲ್ಲಿಂದ ಕಾಪು ಜಂಕ್ಷನ್ವರೆಗೆ ಹಾಗೂ ಕೊಪ್ಪಲಂಗಡಿಯಿಂದ ಕಾಪು ಬೀಚ್ವರೆಗೆ ರಸ್ತೆಯುದ್ದಕ್ಕೂ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ರಾತ್ರಿ ವೇಳೆಯಲ್ಲಿ ಬೆಳಕಿನಿಂದ ಕಂಗೊಳಿಸುವ ಹೆದ್ದಾರಿ ದಸರಾ ಉತ್ಸವದ ಆಕರ್ಷಣೆಯನ್ನು ಹೆಚ್ಚಿಸಿದ್ದು, ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರು ಹಾಗೂ ಈ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರನ್ನು ಸೆಳೆಯುತ್ತಿದೆ.
ವಿದ್ಯುತ್ ದೀಪಾಲಂಕಾರಕ್ಕೆ ಉಡುಪಿ–ಉಚ್ಚಿಲ ದಸರಾ ರೂವಾರಿ ಜಿ. ಶಂಕರ್ ಚಾಲನೆ ನೀಡಿದರು. ಕ್ಷೇತ್ರದ ಪ್ರಧಾನ ಅರ್ಚಕ ರಾಘವೇಂದ್ರ ಉಪಾಧ್ಯಾಯ ಪೂಜಾ ವಿಧಿವಿಧಾನ ನೆರವೇರಿಸಿದರು. ಈ ಸಂದರ್ಭದಲ್ಲಿ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಯಶಪಾಲ್ ಸುವರ್ಣ, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿ, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಗಿರಿಧರ ಸುವರ್ಣ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.



