ಆಟೋರಿಕ್ಷಾವೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಧರೆಗೆ ಡಿಕ್ಕಿ ಹೊಡೆದು ಚರಂಡಿಗೆ ಬಿದ್ದ ಪರಿಣಾಮ ನಾಲ್ವರು ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿರುವ ಘಟನೆ ಮಂಗಳವಾರ ರಾತ್ರಿ ಕಡಬ ತಾಲೂಕಿನ ಕುಂತೂರು ಪದವು–ಮುರಚೆಡವು ಎಂಬ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ.

ಗಾಯಾಳುಗಳನ್ನು ಸುಳ್ಯ ತಾಲೂಕಿನ ಬೆಳ್ಳಾರೆ ಮೂಲದ ಭರತ್, ಇಳವರಸನ್, ಲಕ್ಷ್ಮಣ ಮತ್ತು ರಮೇಶ್ ಎಂದು ಗುರುತಿಸಲಾಗಿದೆ.
ಗಾಯಾಳುಗಳು ಆಟೋರಿಕ್ಷಾದಲ್ಲಿ ಗಡಿ ದೇವಸ್ಥಾನಕ್ಕೆ ತೆರಳಿ ಹರಕೆ ತೀರಿಸಿ ವಾಪಸಾಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಕಡಬ ತಲುಪುವಷ್ಟರಲ್ಲಿ ಆಟೋರಿಕ್ಷಾದ ಗ್ಯಾಸ್ ಖಾಲಿಯಾಗಿದ್ದು, ಕಡಬದಲ್ಲಿ ಗ್ಯಾಸ್ ಲಭ್ಯವಿಲ್ಲದ ಕಾರಣ ಸವಣೂರಿನ ಪೆಟ್ರೋಲ್ ಬಂಕ್‌ನಲ್ಲಿ ಗ್ಯಾಸ್ ತುಂಬಿಸಿಕೊಳ್ಳಲು ಆಲಂಕಾರು ಮಾರ್ಗವಾಗಿ ತೆರಳುತ್ತಿದ್ದರು. ಈ ವೇಳೆ ಮುರಚೆಡವು ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಆಟೋರಿಕ್ಷಾ ರಸ್ತೆ ಬದಿಯ ಧರೆಗೆ ಡಿಕ್ಕಿ ಹೊಡೆದು ಚರಂಡಿಗೆ ಉರುಳಿದೆ.

ಆಟೋರಿಕ್ಷಾದ ಹಿಂದೆಯೇ ಬೈಕ್‌ನಲ್ಲಿ ಬರುತ್ತಿದ್ದ ಬೆಳ್ಳಾರೆಯ ಧನರಾಜ್ ಅವರು ತಕ್ಷಣ ವಾಹನ ನಿಲ್ಲಿಸಿ ಸ್ಥಳೀಯರ ನೆರವಿನಿಂದ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಆಟೋರಿಕ್ಷಾದ ಹಿಂಭಾಗದಲ್ಲಿದ್ದ ಲಕ್ಷ್ಮಣ, ಭರತ್ ಹಾಗೂ ಇಳವರಸನ್ ಅವರನ್ನು ಹೊರತೆಗೆದಾಗ ಮೂವರೂ ಗಂಭೀರವಾಗಿ ಗಾಯಗೊಂಡು ಪ್ರಜ್ಞೆ ತಪ್ಪಿದ್ದರು ಎನ್ನಲಾಗಿದೆ. ಚಾಲಕ ರಮೇಶ್ ಅವರಿಗೂ ಗಾಯಗಳಾಗಿವೆ.
ಗಾಯಾಳುಗಳನ್ನು ತಕ್ಷಣ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ. ಈ ಪೈಕಿ ಭರತ್ ಮತ್ತು ಲಕ್ಷ್ಮಣ ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಈ ಘಟನೆಗೆ ಸಂಬಂಧಿಸಿ ಧನರಾಜ್ ನೀಡಿದ ದೂರಿನಂತೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



