ಕೇರಳ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರು ಎಡನೀರು ಮಠಕ್ಕೆ ಭೇಟಿ ನೀಡಿದ್ದು, ಮಠದ ಪೀಠಾಧಿಪತಿ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಆತ್ಮೀಯವಾಗಿ ಸ್ವಾಗತಿಸಿ ಗೌರವಿಸಿದರು.

ಈ ಸಂದರ್ಭ ಮಾತನಾಡಿದ ಮುಖ್ಯಮಂತ್ರಿ, ಎಡನೀರು ಮಠವು ಜಾತ್ಯತೀತತೆ, ನೈತಿಕತೆ, ಸಹೋದರತೆ ಮತ್ತು ಕರುಣೆಯ ಪ್ರತೀಕವಾಗಿರುವ ಪವಿತ್ರ ಕೇಂದ್ರ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕಾನೂನು ವಿದ್ಯಾರ್ಥಿಯಾಗಿದ್ದಾಗಲೇ ಮಠದ ಬಗ್ಗೆ ತಿಳಿದುಕೊಂಡಿದ್ದಾಗಿ ಹೇಳಿದ ಅವರು, ಕೇಶವಾನಂದ ಭಾರತಿ ಪ್ರಕರಣದ ಐತಿಹಾಸಿಕ ತೀರ್ಪು ಭಾರತದ ಕಾನೂನು ಇತಿಹಾಸದಲ್ಲಿ ಮಹತ್ವದ ಸ್ಥಾನ ಹೊಂದಿದೆ ಎಂದು ಸ್ಮರಿಸಿದರು.

ಈ ಹಿಂದೆ ಶಾಸಕರಾಗಿ ಹಾಗೂ ಪ್ರತಿಪಕ್ಷ ನಾಯಕರಾಗಿದ್ದ ಸಂದರ್ಭದಲ್ಲೂ ಮಠಕ್ಕೆ ಭೇಟಿ ನೀಡಿದ್ದಾಗಿ ತಿಳಿಸಿದರು. ಮಠದ ವತಿಯಿಂದ ಅಶೋಕ ಸ್ತಂಭದ ಲಾಂಛನ ಹೊಂದಿರುವ ಸ್ಮರಣಿಕೆಯನ್ನು ಸ್ವಾಮೀಜಿ ಮುಖ್ಯಮಂತ್ರಿಗೆ ನೀಡಿ ಗೌರವಿಸಿದರು.

ಬಳಿಕ ದೇವಸ್ಥಾನದಲ್ಲಿ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದ ಮುಖ್ಯಮಂತ್ರಿ, ಸ್ವಾಮೀಜಿಯವರೊಂದಿಗೆ ಮಾತುಕತೆ ನಡೆಸಿ ಮತ್ತೊಮ್ಮೆ ಮಠಕ್ಕೆ ಭೇಟಿ ನೀಡುವ ಭರವಸೆಯೊಂದಿಗೆ ನಿರ್ಗಮಿಸಿದರು.



