ಪುತ್ತೂರಿನ ಇತಿಹಾಸ ಪ್ರಸಿದ್ಧ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ಧಾರ್ಮಿಕ ಸಂಭ್ರಮ ಮನೆಮಾಡಿದ್ದು, ಕಾರ್ತಿಕ ದೀಪೋತ್ಸವದ ಅಂಗವಾಗಿ ನ.23ರಂದು ರಾತ್ರಿ ಮೃಗಬೇಟೆ ಉತ್ಸವದ ಪ್ರಯುಕ್ತ ಶ್ರೀ ದೇವರ ಪೇಟೆ ಸವಾರಿ ಉತ್ಸವ ಭಕ್ತಿಭಾವದಿಂದ ನೆರವೇರಿತು.

ಇಂದು ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ, ಲಕ್ಷದೀಪೋತ್ಸವ ಹಾಗೂ ಕುರಿಂಡೋತ್ಸವ ನಡೆಯಲಿದ್ದು, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಬೆಳಿಗ್ಗೆ ಶ್ರೀ ದೇವಳದಲ್ಲಿ ಪ್ರಾರ್ಥನೆ ಬಳಿಕ ವನಭೋಜನ ಕಟ್ಟೆಗೆ ಶ್ರೀ ದೇವರು ಚಿತ್ತೈಸಲಿದ್ದು, ಅಲ್ಲಿ ಧಾತ್ರಿ ಹೋಮ ನೆರವೇರಲಿದೆ. ಮಧ್ಯಾಹ್ನ ವನದಲ್ಲಿ ಶ್ರೀ ದೇವರಿಗೆ ಮಹಾಪೂಜೆ ನಡೆಯಲಿದೆ.

ಸಂಜೆ 7 ಗಂಟೆಗೆ ದೀಪ ನಮಸ್ಕಾರ ಸೇವೆ ನಡೆಯಲಿದ್ದು, ರಾತ್ರಿ ಪೂಜೆಯ ಬಳಿಕ ಶ್ರೀ ದೇವರು ವನಭೋಜನ ಕಟ್ಟೆಯಲ್ಲಿ ಆಸೀನರಾದ ನಂತರ ಸುಡುಮದ್ದು ಪ್ರದರ್ಶನ, ಶ್ರೀ ದೇವರ ಪೇಟೆ ಸವಾರಿ ಉತ್ಸವ ಹಾಗೂ ಕಟ್ಟೆಪೂಜೆಗಳು ನೆರವೇರಲಿವೆ. ಬಳಿಕ ದರ್ಬೆ ವೃತ್ತದಲ್ಲಿ ಕುರಿಂಡೋತ್ಸವ ನಡೆಯಲಿದ್ದು, ಕಾರ್ತಿಕ ಮಾಸದ ಧಾರ್ಮಿಕ ಆಚರಣೆಗಳು ಭಕ್ತಿಭಾವದೊಂದಿಗೆ ಸಂಪನ್ನಗೊಳ್ಳಲಿವೆ.



