ಜನ ಮನದ ನಾಡಿ ಮಿಡಿತ

Advertisement

ಬೆಂಗಳೂರು: ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಆಡಳಿತ ಭಾಷೆಯಾಗಿ ತುಳುವಿಗೆ ಮಾನ್ಯತೆ

ಕರಾವಳಿ ಕರ್ನಾಟಕದ ಪ್ರಮುಖ ಭಾಷೆಯಾಗಿರುವ ತುಳುವಿಗೆ ರಾಜ್ಯ ಸರ್ಕಾರ ಮಹತ್ವದ ಆಡಳಿತಾತ್ಮಕ ಮಾನ್ಯತೆ ನೀಡಿದೆ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕನ್ನಡದ ಜೊತೆಗೆ ತುಳು ಭಾಷೆಯನ್ನು ಹೆಚ್ಚುವರಿ ಭಾಷೆಯಾಗಿ ಬಳಸಲು ಅನುಮೋದನೆ ನೀಡಿ ಸರ್ಕಾರ ಆದೇಶ ಹೊರಡಿಸಿದೆ. ಈ ನಿರ್ಧಾರವು ತುಳು ಭಾಷೆಯ ಬೆಳವಣಿಗೆ ಹಾಗೂ ತುಳು ಭಾಷಿಕರಿಗೆ ಸರ್ಕಾರಿ ಸೇವೆಗಳನ್ನು ಸುಲಭವಾಗಿ ತಲುಪಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.

ಈ ಸಂಬಂಧ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸರ್ಕಾರದ ಆದೇಶ ಪ್ರಕಟಿಸಿದ್ದು, ಕರ್ನಾಟಕ ರಾಜ್ಯಭಾಷಾ ಅಧಿನಿಯಮ-1963ರ ಪ್ರಕಾರ ಕನ್ನಡ ರಾಜ್ಯದ ಅಧಿಕೃತ ಭಾಷೆಯಾಗಿ ಮುಂದುವರಿಯಲಿದೆ. ಇದರೊಂದಿಗೆ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ವ್ಯಾಪ್ತಿಯಲ್ಲಿ ಮಾತ್ರ ತುಳು ಭಾಷೆಯನ್ನು ಹೆಚ್ಚುವರಿ ಆಡಳಿತ ಭಾಷೆಯಾಗಿ ಬಳಸಲು ಅವಕಾಶ ಕಲ್ಪಿಸಲಾಗಿದೆ.

ತುಳು ಭಾಷೆಗೆ ಆಡಳಿತಾತ್ಮಕ ಮಾನ್ಯತೆ ನೀಡುವಂತೆ ಹಲವು ವರ್ಷಗಳಿಂದ ವಿವಿಧ ಸಂಘ-ಸಂಸ್ಥೆಗಳು, ಗಣ್ಯರು ಹಾಗೂ ಸಾರ್ವಜನಿಕ ವಲಯದಿಂದ ಸರ್ಕಾರಕ್ಕೆ ಮನವಿಗಳು ಸಲ್ಲಿಕೆಯಾಗಿದ್ದವು. ಈ ಹಿನ್ನೆಲೆಯಲ್ಲಿ 2023ರಲ್ಲಿ ಸರ್ಕಾರ ವಿಶೇಷ ಅಧ್ಯಯನ ಸಮಿತಿ ರಚಿಸಿತ್ತು. ಸಮಿತಿಯು ತುಳು ಭಾಷೆಯ ಇತಿಹಾಸ, ಸಾಹಿತ್ಯ ಪರಂಪರೆ, ಲಿಪಿ, ಸಂಸ್ಕೃತಿ, ಶಾಸನಗಳು ಹಾಗೂ ಪ್ರಾಚೀನ ಮತ್ತು ಆಧುನಿಕ ಸಾಹಿತ್ಯದ ಕುರಿತು ಅಧ್ಯಯನ ನಡೆಸಿ ವರದಿ ಸಲ್ಲಿಸಿತ್ತು.

ತುಳು ಭಾಷೆ ಭಾಷಿಕವಾಗಿ, ಶೈಕ್ಷಣಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಸಮೃದ್ಧವಾಗಿದ್ದು, ಅದರ ಬೆಳವಣಿಗೆಯು ಕರಾವಳಿ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಸಮಿತಿ ಅಭಿಪ್ರಾಯಪಟ್ಟಿತ್ತು. ಬಳಿಕ ಅನುಷ್ಠಾನದ ಸಾಧ್ಯತೆಗಳನ್ನು ಪರಿಶೀಲಿಸಲು ಮತ್ತೊಂದು ಅಧ್ಯಯನ ತಂಡ ರಚಿಸಲಾಗಿತ್ತು. ಈ ತಂಡವು ಆಂಧ್ರಪ್ರದೇಶದಲ್ಲಿ ಉರ್ದು ಭಾಷೆಯ ಬಳಕೆ ಹಾಗೂ ಪಶ್ಚಿಮ ಬಂಗಾಳದಲ್ಲಿ ಅನುಸರಿಸಿರುವ ಹೆಚ್ಚುವರಿ ಭಾಷೆಗಳ ಆಡಳಿತಾತ್ಮಕ ಮಾದರಿಗಳನ್ನು ಅಧ್ಯಯನ ಮಾಡಿ ವರದಿ ಸಲ್ಲಿಸಿತ್ತು.

ಈ ಎಲ್ಲ ವರದಿಗಳನ್ನು ಪರಿಶೀಲಿಸಿದ ಬಳಿಕ ಮಂಗಳೂರಿನಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗಿದೆ. ಅದರಂತೆ ತುಳು ಭಾಷೆಯನ್ನು ಕನ್ನಡ ಲಿಪಿಯಲ್ಲಿಯೇ ಬಳಸಲು ಸರ್ಕಾರ ತೀರ್ಮಾನಿಸಿದೆ.

ಆದೇಶದ ಪರಿಣಾಮಕಾರಿ ಅನುಷ್ಠಾನಕ್ಕಾಗಿ ವಿಶೇಷ ಅನುಷ್ಠಾನ ಘಟಕ ಸ್ಥಾಪಿಸಲಾಗುತ್ತದೆ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಗಳಲ್ಲಿ ತಲಾ ಇಬ್ಬರಂತೆ ಒಟ್ಟು ನಾಲ್ವರು ಭಾಷಾಂತರಕಾರರನ್ನು ನೇಮಿಸಲಾಗುತ್ತದೆ. ಇವರಿಗೆ ಪ್ರತಿ ತಿಂಗಳು 30 ಸಾವಿರ ರೂ. ಗೌರವ ಸಂಭಾವನೆ ನೀಡಲಾಗುತ್ತದೆ.

ಇದಲ್ಲದೆ, ದಕ್ಷಿಣ ಕನ್ನಡ ಜಿಲ್ಲೆಯ 9 ಮತ್ತು ಉಡುಪಿ ಜಿಲ್ಲೆಯ 7 ತಾಲ್ಲೂಕುಗಳು ಸೇರಿದಂತೆ ಒಟ್ಟು 16 ತಾಲ್ಲೂಕು ಕಚೇರಿಗಳಲ್ಲಿ ತಲಾ ಒಬ್ಬರಂತೆ 16 ಭಾಷಾಂತರಕಾರರನ್ನು ನೇಮಕ ಮಾಡಲು ಅನುಮೋದನೆ ನೀಡಲಾಗಿದೆ. ಇವರಿಗೂ ಮಾಸಿಕ 30 ಸಾವಿರ ರೂ. ಗೌರವ ಸಂಭಾವನೆ ನಿಗದಿಪಡಿಸಲಾಗಿದೆ.

ಮುಂದಿನ ದಿನಗಳಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಸಾರ್ವಜನಿಕ ಕಚೇರಿಗಳಲ್ಲಿ ತುಳು ಭಾಷೆಯಲ್ಲಿ ಸಲ್ಲಿಸುವ ಅರ್ಜಿ ಹಾಗೂ ಮನವಿಗಳನ್ನು ಸ್ವೀಕರಿಸಲಾಗುತ್ತದೆ. ನಾಗರಿಕರಿಗೆ ನೀಡುವ ಮಾಹಿತಿ ಮತ್ತು ಉತ್ತರಗಳನ್ನು ಕನ್ನಡದ ಜೊತೆಗೆ ತುಳು ಭಾಷೆಯಲ್ಲಿಯೂ ಒದಗಿಸಲಾಗುತ್ತದೆ. ಜಿಲ್ಲಾಧಿಕಾರಿ ಕಚೇರಿಗಳಿಂದ ಹೊರಡಿಸುವ ಪ್ರಮುಖ ಆದೇಶಗಳು, ಪ್ರಕಟಣೆಗಳು ಹಾಗೂ ಸಾರ್ವಜನಿಕ ಸೂಚನಾ ಫಲಕಗಳಲ್ಲಿಯೂ ತುಳು ಭಾಷೆಗೆ ಅವಕಾಶ ಕಲ್ಪಿಸಲಾಗುತ್ತದೆ.

ಸರ್ಕಾರದ ಈ ನಿರ್ಧಾರದಿಂದ ತುಳು ಭಾಷಿಕರಿಗೆ ಆಡಳಿತ ವ್ಯವಸ್ಥೆಯೊಂದಿಗೆ ಸಂವಹನ ನಡೆಸುವುದು ಸುಲಭವಾಗಲಿದೆ. ಸರ್ಕಾರಿ ಸೇವೆಗಳನ್ನು ತಮ್ಮ ಮಾತೃಭಾಷೆಯಲ್ಲಿ ಪಡೆಯಲು ಅನುಕೂಲವಾಗುವುದರ ಜೊತೆಗೆ ತುಳು ಭಾಷೆಯ ಸಂರಕ್ಷಣೆ ಮತ್ತು ಬೆಳವಣಿಗೆಗೂ ಹೊಸ ಉತ್ತೇಜನ ದೊರೆಯಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ. ಕರಾವಳಿಯ ಭಾಷಾ ಮತ್ತು ಸಾಂಸ್ಕೃತಿಕ ಪರಂಪರೆಗೆ ರಾಜ್ಯ ಸರ್ಕಾರದ ಈ ನಿರ್ಧಾರ ಮಹತ್ವದ ಕೊಡುಗೆಯಾಗಿ ಗುರುತಿಸಲ್ಪಟ್ಟಿದೆ.

Leave a Reply

Your email address will not be published. Required fields are marked *

ಮಂಗಳೂರು: ಕ್ಲಸ್ಟರ್ ಕಿಚನ್ ವಿರೋಧಿಸಿ ಉಳ್ಳಾಲದಲ್ಲಿ ಬಿಸಿಯೂಟ ನೌಕರರ ಪ್ರತಿಭಟನೆ

ಬಂಟ್ವಾಳ: ಪಾಣೆಮಂಗಳೂರು ಹಳೆ ಸೇತುವೆಯ ಕಬ್ಬಿಣದ ಕಮಾನು ಮರುಜೋಡಣೆ

ಮಂಗಳೂರು: ಬಂಟ್ವಾಳದಲ್ಲಿ ಅಬಕಾರಿ ದಾಳಿ: 20.37 ಲಕ್ಷ ಮೌಲ್ಯದ ಗೋವಾ ಮದ್ಯ ಜಪ್ತಿ

ಮಂಜೇಶ್ವರ: ಮಂಜೇಶ್ವರದ ಪೊಸೋಟ್ ಮಖಾಂನಲ್ಲಿ ಕಳ್ಳತನ: 50 ಸಾವಿರ ರೂ. ನಗದು ದೋಚಿದ ಕಳ್ಳರು

ಪುತ್ತೂರು: ಪುತ್ತೂರು ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ವಿಜೃಂಭಣೆಯ ಕಾರ್ತಿಕ ದೀಪೋತ್ಸವ

ಬಂಟ್ವಾಳ: ಬಂಟ್ವಾಳದಲ್ಲಿ ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಜಾಗೃತಿ ಕಾರ್ಯಕ್ರಮ

ಉಡುಪಿ: ಶ್ರೀಕೃಷ್ಣ ಮಠಕ್ಕೆ ವಿಧಾನಪರಿಷತ್ ಉಪಸಭಾಪತಿ ಉಮಾಶ್ರೀ ಭೇಟಿ

ಉಡುಪಿ: ಶಿರೂರಿನಲ್ಲಿ ಭೀಕರ ರಸ್ತೆ ಅಪಘಾತ: ಇಬ್ಬರು ಯುವಕರು ಸ್ಥಳದಲ್ಲೇ ಸಾವು

ಮಂಗಳೂರು: ‘ಪದ್ಮನಾಭ ಆ್ಯಂಡ್ ಫ್ಯಾಮಿಲಿ’ ಸಿನಿಮಾದ ಟೀಸರ್ ಬಿಡುಗಡೆ; ಜ.15ಕ್ಕೆ ಚಿತ್ರ ತೆರೆಗೆ

error: Content is protected !!