ಮಂಗಳೂರು ನಗರದಲ್ಲಿ ಪಾದಚಾರಿ ಮಾರ್ಗವನ್ನು ಅತಿಕ್ರಮಿಸಿ ವ್ಯಾಪಾರ ಮಾಡುತ್ತಿದ್ದ ಬೀದಿ ಬದಿಯ ವ್ಯಾಪಾರಿಗಳನ್ನು ತೆರವು ಮಾಡುವ ಕಾರ್ಯಾಚರಣೆಯನ್ನು ಮಂಗಳೂರು ಮಹಾನಗರ ಪಾಲಿಕೆ ಪುನರಾರಂಭ ಮಾಡಿದೆ. ಈ ಸಂದರ್ಭದಲ್ಲಿ ಅಧಿಕಾರಿಗಳಿಗೆ ಘೇರಾವ್ ಹಾಕಿದ ಘಟನೆಯೂ ನಡೆದಿದೆ.
ಮಂಗಳೂರು ನಗರದ ಹಲವೆಡೆ ಮಹಾನಗರ ಪಾಲಿಕೆ ಅಧಿಕಾರಿಗಳು ಪೊಲೀಸ್ ಬಲ ಪ್ರಯೋಗಿಸಿ ಬೀದಿಬದಿ ವ್ಯಾಪಾರಿಗಳನ್ನು ತೆರವು ಮಾಡುವ ಕಾರ್ಯಾಚರಣೆ ನಡೆಸಿದ್ದಾರೆ. ಏತನ್ಮಧ್ಯೆ ಕಾರ್ಯಾಚರಣೆ ಕಾನೂನು ಬಾಹಿರ ಮತ್ತು ಬಡ ಬೀದಿ ವ್ಯಾಪಾರಿಗಳ ಮೇಲಿನ ದಾಳಿ ಖಂಡನೀಯ ಎಂದು ದಕ್ಷಿಣ ಕನ್ನಡ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘ ಸಿಐಟಿಯು ಆರೋಪಿಸಿದೆ.

ನಗರಪಾಲಿಕೆ ಅಧಿಕಾರಿಗಳು ಬೀದಿ ವ್ಯಾಪಾರದ ನಿಯಮ ಮತ್ತು ಕಾನೂನುಗಳನ್ನು ಪಾಲಿಸುತ್ತಿಲ್ಲ, ನಗರಪಾಲಿಕೆ ಆಡಳಿತ ವ್ಯವಸ್ಥೆ ಯಲ್ಲಿ ಜನರ ಪ್ರತಿನಿಧಿಗಳು ಇಲ್ಲ, ನಗರಪಾಲಿಕೆಯ ವ್ಯಾಪ್ತಿಯಲ್ಲಿ ಪಟ್ಟಣ ವ್ಯಾಪಾರ ಸಮಿತಿ ಅಸ್ತಿತ್ವದಲ್ಲಿಲ್ಲ, ಬೀದಿಬದಿ ವ್ಯಾಪಾರಿಗಳ ಸಮಸ್ಯೆಗಳನ್ನು ಆಲಿಸಲು ನಿವೃತ್ತ ನ್ಯಾಯಾಧೀಶರ ನೇತೃತ್ವದ ಕುಂದುಕೊರತೆ ನಿವಾರಣಾ ಸಮಿತಿಯು ಇಲ್ಲ,, ಮೇಲ್ಮನವಿ ಪ್ರಾಧಿಕಾರವೂ ಅಸ್ತಿತ್ವ ದಲ್ಲಿ ಇಲ್ಲದಿರುವಾಗ ಕಾರ್ಯಾಚರಣೆ ನಡೆಸಿರುವುದು ಅಧಿಕಾರಿಗಳ ಸಂವಿಧಾನ ವಿರೋಧಿ ಕ್ರಮವಾಗಿದೆ ಎಂದು ಸಿಐಟಿಯು ಟೀಕಿಸಿದೆ ಸ್ಟೇಟ್ ಬ್ಯಾಂಕ್ ಬಳಿ ಪಾದಚಾರಿ ಮಾರ್ಗವನ್ನು ಅತಿಕ್ರಮಿಸಿ ವ್ಯಾಪಾರ ಮಾಡುತ್ತಿರುವುದರಿಂದ ಸಾರ್ವಜನಿಕ ಸಂಚಾರಕ್ಕೆ ತೊಡಕಾಗಿದೆ.

ಈ ಬಗ್ಗೆ ಸಾರ್ವಜನಿಕರಿಂದಲೂ ದೂರುಗಳು ಬಂದಿದ್ದವು. ಮಳೆಗಾಲದಲ್ಲಿ ಈ ವ್ಯಾಪಾರಿಗಳು ಟೆಂಟ್ ಕಟ್ಟಿ, ಸಾರ್ವಜನಿಕ ಸ್ಥಳಗಳನ್ನು ಅತಿಕ್ರಮಿಸುತ್ತಾರೆ. ಇವರ ಅಂಗಡಿಗಳ ಎದುರು ಸಾರ್ವಜನಿಕರು ವಾಹನ ನಿಲ್ಲಿಸುವುದರಿಂದ ಸಂಚಾರಕ್ಕೆ ಇರುವ ಅವಕಾಶವೂ ಕಡಿಮೆಯಾಗುತ್ತದೆ. ಆದರೆ ಬೀದಿ ಬದಿಯ ವ್ಯಾಪಾರಸ್ಥರ ವಾದವೇ ಬೇರೆ. ಅಧಿಕಾರಿಗಳು ಧಾಳಿ ನಡೆಸುತ್ತಿರುವುದು ಯಾರದೋ ಕುಮ್ಮಕ್ಕಿನಿಂದ, ಕಂಟೋನ್ಮೆ0ಟ್ ವಾರ್ಡಲ್ಲಿ ನಿರ್ಮಾಣಗೊಂಡಿರುವ ಬೀದಿ ವ್ಯಾಪಾರ ವಲಯ ಅಸಮರ್ಪಕವಾಗಿದೆ ಮತ್ತು ಅವೈಜ್ಞಾನಿಕವಾಗಿದ್ದು ಅಲ್ಲದೇ ಹತ್ತಿರದ ವಾರ್ಡಿನಲ್ಲಿ ರಸ್ತೆ ಬದಿಯಲ್ಲೇ ವ್ಯಾಪಾರ ನಡೆಯುತ್ತಿರುವುದರಿಂದ ಗ್ರಾಹಕರು ವ್ಯಾಪಾರ ವಲಯದ ಒಳಗೆ ಬಾರದೆ ವ್ಯಾಪಾರಿಗಳು ತೀವ್ರ ನಷ್ಟ ಅನುಭವಿಸುತ್ತಿದ್ದರೂ ಅಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿರುವುದು ಅಮಾನವೀಯ .ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಿಲ್ಲಿಸಬೇಕು ಎಂದು ಒತ್ತಾಯಿಸಿದ್ರು. ನಗರದಲ್ಲಿ ಬಡ ಬೀದಿ ವ್ಯಾಪಾರಿಗಳ ಮೇಲೆ ಧಾಳಿ ಮುಂದುವರಿದರೆ ಬೀದಿ ವ್ಯಾಪಾರಿಗಳನ್ನು ಸಂಘಟಿಸಿ ಹೋರಾಟಕ್ಕಿಳಿಯುವುದು ಅನಿವಾರ್ಯ ಎಂದು ದಕ್ಷಿಣ ಕನ್ನಡ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘದ ಗೌರವಧ್ಯಕ್ಷರಾದ ಬಿಕೆ ಇಮ್ತಿಯಾಝ್ ಮತ್ತು ಕಾರ್ಯಧ್ಯಕ್ಷರಾದ ಸುನಿಲ್ ಕುಮಾರ್ ಬಜಾಲ್ ಹೇಳಿದ್ದಾರೆ.



