ಹೋಟೆಲ್‌ನಲ್ಲಿದ್ದ ಎರಡು ಸಿಲಿಂಡರ್ ಏಕಾಏಕಿ ಬ್ಲಾಸ್ಟ್ ಆದ ಪರಿಣಾಮ ಹೋಟೆಲ್ ಹೊತ್ತಿ ಉರಿದ ಘಟನೆ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ತೆಕ್ಕಲಕೋಟೆಯಲ್ಲಿ ನಡೆದಿದೆ.

ತೆಕ್ಕಲಕೋಟೆಯ ಈರಣ್ಣ ಎನ್ನುವವರಿಗೆ ಸೇರಿದ ಹೋಟೆಲ್‌ನಲ್ಲಿ ತಡರಾತ್ರಿ 2 ಗಂಟೆ ಸುಮಾರಿಗೆ ಅವಘಡ ಸಂಭವಿಸಿದೆ. ಹೋಟೆಲ್‌ನಲ್ಲಿ ಈರಣ್ಣನ ಕುಟುಂಬಸ್ಥರು 9 ಜನ ಮಲಗಿದ್ದರು ಎನ್ನಲಾಗಿದೆ. 9 ಜನರ ಪೈಕಿ ಓರ್ವ ಬಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಸಿಲಿಂಡರ್ ಸ್ಫೋಟ ಪ್ರಕರಣದಲ್ಲಿ 10 ವರ್ಷದ ಶ್ರೀನಿವಾಸ್‌ಗೆ ಗಾಯಗಳಾಗಿವೆ. ಗಾಯಾಳು ಬಾಲಕನನ್ನು ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಉಳಿದವರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಂಕಿಯ ಕೆನ್ನಾಲಿಗೆಗೆ ಸಿಕ್ಕು ಹೋಟೆಲ್‌ನಲ್ಲಿನ ವಸ್ತುಗಳೆಲ್ಲವೂ ಸುಟ್ಟು ಕರಕಲಾಗಿದ್ದು, ಜೀವನೋಪಾಯಕ್ಕೆ ಇದ್ದ ಹೊಟೇಲ್‌ಗೆ ಬೆಂಕಿ ಬಿದ್ದಿದ್ದರಿಂದ ಹೋಟೆಲ್ ಮಾಲೀಕರು ಕಂಗಾಲಾಗಿದ್ದಾರೆ. ಸಿಲಿಂಡರ್ ಬ್ಲಾಸ್ಟ್ ಆದ ಹೋಟೆಲ್‌ನ ಅಕ್ಕಪಕ್ಕದ ಎರಡ್ಮೂರು ಅಂಗಡಿಗಳಿಗೂ ಬೆಂಕಿ ವ್ಯಾಪಿಸಿದ ಪರಿಣಾಮ, ಟೈಯರ್ ಅಂಗಡಿಯೂ ಹೊತ್ತಿ ಉರಿದಿದೆ. ಘಟನೆ ಸಂಬಂಧ ತೆಕ್ಕಲಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



