ಸಿಡಿಲು ಬಡಿದು ದೇವಾಲಯದ ಅರ್ಚಕರೊಬ್ಬರು ಮೃತಪಟ್ಟ ಘಟನೆ ಹಾಸನ ತಾಲೂಕಿನ ಕಟ್ಟಾಯ ಹೋಬಳಿಯ ಚನ್ನಂಗಿಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮೃತಪಟ್ಟವರು ಗ್ರಾಮದ ಆಂಜನೇಯ ಸ್ವಾಮಿ ದೇವಾಲಯದ ಅರ್ಚಕರಾಗಿದ್ದ ರಂಗನಾಥ್ (60) ಎಂದು ತಿಳಿದು ಬಂದಿದೆ. ರಂಗನಾಥ್ ಶುಕ್ರವಾರ ಸಂಜೆ ವೇಳೆ ತಮ್ಮ ಜಮೀನಿನಲ್ಲಿ ಕಟ್ಟಿದ್ದ ಜಾನುವಾರುಗಳನ್ನು ಕರೆತರುವ ಉದ್ದೇಶದಿಂದ ತೆರಳಿದ್ದರು. ಜಾನುವಾರುಗಳೊಂದಿಗೆ ಮನೆಗೆ ಮರಳುತ್ತಿದ್ದ ವೇಳೆ ಸಿಡಿಲು ಬಡಿದು ರಂಗನಾಥ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಈ ಕುರಿತು ಗೊರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



