ನಗರದ ಕೆ.ಎಸ್. ರಾವ್ ರಸ್ತೆಯ ಮಾಲ್‌ವೊಂದರಲ್ಲಿರುವ ಕೆಎಫ್‌ಸಿಯಲ್ಲಿ ಕಲುಷಿತ ಆಹಾರ ಪೂರೈಕೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಹಾಗೂ ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ದಾಳಿಯ ವೇಳೆ ಕೆಎಫ್‌ಸಿಯಲ್ಲಿ ಅನೈರ್ಮಲ್ಯ, ಹಳೆಯ ಮಾಂಸ ಹಾಗೂ ಅವಧಿ ಮೀರಿದ ಎಣ್ಣೆ ಪತ್ತೆಯಾಗಿದ್ದು, ಅಧಿಕಾರಿಗಳು ಅವುಗಳನ್ನು ವಶಕ್ಕೆ ಪಡೆದಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಘಟಕಕ್ಕೆ ಬೀಗ ಹಾಕಲಾಗಿದೆ.
ಇತ್ತೀಚೆಗೆ ವ್ಯಕ್ತಿಯೊಬ್ಬರು ಕೆಎಫ್‌ಸಿಯಿಂದ ಚಿಕನ್ ಫ್ರೈ ಆರ್ಡರ್ ಮಾಡಿದ್ದು, ಆಹಾರದ ಬಾಕ್ಸ್ ತೆರೆದಾಗ ಕೆಟ್ಟ ವಾಸನೆ ಬಂದಿರುವುದಾಗಿ ದೂರು ನೀಡಿದ್ದರು. ಈ ವಿಚಾರವನ್ನು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರ ಗಮನಕ್ಕೆ ತರಲಾಗಿತ್ತು. ಸಚಿವರ ಸೂಚನೆಯ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಪರಿಶೀಲನೆ ವೇಳೆ ಸ್ಟೋರೇಜ್ ಕೊಠಡಿಯಿಂದ ಗಬ್ಬು ವಾಸನೆ ಬರುತ್ತಿದ್ದು, ಅಲ್ಲಿ ವಿವಿಧ ಮಾದರಿಯ ಚಿಕನ್ ಮಾಂಸ ದಾಸ್ತಾನು ಮಾಡಿರುವುದು ಕಂಡುಬಂದಿದೆ. ಜೊತೆಗೆ ಅವಧಿ ಮೀರಿದ ಎಣ್ಣೆಯೂ ಪತ್ತೆಯಾಗಿದೆ.
ಪತ್ತೆಯಾದ ಆಹಾರ ಮಾದರಿಗಳನ್ನು ಮೈಸೂರಿನ ಆಹಾರ ತಪಾಸಣಾ ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ಕಳುಹಿಸಲಾಗುತ್ತದೆ. ವರದಿ ಬಂದ ಬಳಿಕ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.



