ಒಂದು ಕಾಲದಲ್ಲಿ ಹೋರಾಟದ ಹೆಜ್ಜೆಗಳ ಸದ್ದು, ಜನಪರ ಚಿಂತನೆಗಳ ಚರ್ಚೆ ಹಾಗೂ ಸ್ವಾತಂತ್ರ್ಯದ ಕನಸುಗಳಿಗೆ ಸಾಕ್ಷಿಯಾಗಿದ್ದ ಮನೆ ಇಂದು ಮೌನವಾಗಿದೆ. ಮಾರ್ನಬೈಲಿನ ಪೊದೆಗಳ ನಡುವೆ ತಲೆ ಎತ್ತಿ ನಿಂತಿರುವ ‘ಅಹಿಂಸಾ ಮನೆ’ಗೆ ಈಗ ಬೀಗ ಬಿದ್ದಿದೆ. ಸುತ್ತಲೂ ಬೆಳೆದು ನಿಂತಿರುವ ಗಿಡಗಂಟಿಗಳ ನಡುವೆ ಈ ಮನೆ ತನ್ನೊಳಗೆ ಒಂದು ಕಾಲದ ಇತಿಹಾಸವನ್ನು ಹೊತ್ತು ನಿಂತಿದೆ.

ಇದು ಸಾಮಾನ್ಯ ಮನೆಯಲ್ಲ. ದಕ್ಷಿಣ ಕನ್ನಡದ ಸ್ವಾತಂತ್ರ್ಯ ಹೋರಾಟಗಾರ, ಸಮಾಜವಾದಿ ಚಿಂತಕ ಹಾಗೂ ಜನಪರ ಹೋರಾಟಗಾರ ಡಾ. ಅಮ್ಮೆಂಬಳ ಬಾಳಪ್ಪ ಅವರು ತಮ್ಮ ಜೀವನದ ಕೊನೆಯ ದಿನಗಳನ್ನು ಕಳೆದ ಮನೆ.
ಬಾಳಪ್ಪರು 2014ರ ಮೇ 15ರಂದು ನಿಧನರಾದರು. ಅವರ ನಿಧನದ ಬಳಿಕ ಅವರ ತಮ್ಮನ ಪತ್ನಿ ಈ ಮನೆಯಲ್ಲಿ ವಾಸಿಸುತ್ತಿದ್ದರು. ಅನಾರೋಗ್ಯದ ಹಿನ್ನೆಲೆಯಲ್ಲಿ ಅವರನ್ನು ಆಶ್ರಮಕ್ಕೆ ಸೇರಿಸಲಾಗಿತ್ತು. ಸುಮಾರು ಒಂದೂವರೆ ವರ್ಷಗಳ ಹಿಂದೆ ಅವರೂ ನಿಧನರಾದ ಬಳಿಕ ‘ಅಹಿಂಸಾ ಮನೆ’ ಸಂಪೂರ್ಣವಾಗಿ ನಿರ್ಜನವಾಗಿದೆ.

ಸ್ವಾತಂತ್ರ್ಯ ಹೋರಾಟದಿಂದ ಜನಪರ ಚಳವಳಿವರೆಗೆ
ಬಂಟ್ವಾಳ ತಾಲೂಕಿನ ಅಮ್ಮೆಂಬಳ ಬಾಳಪ್ಪರ ಹುಟ್ಟೂರು. ಸ್ವಾತಂತ್ರ್ಯ ಹೋರಾಟದಿಂದ ಹಿಡಿದು ಕಾರ್ಮಿಕ, ಸಮಾಜವಾದಿ ಹಾಗೂ ಜನಪರ ಹೋರಾಟಗಳವರೆಗೆ ತಮ್ಮನ್ನು ತೊಡಗಿಸಿಕೊಂಡಿದ್ದ ಅವರು ಮಂಗಳೂರನ್ನೇ ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡಿದ್ದರು.
1942ರ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿದ್ದ ಬಾಳಪ್ಪರು ಬ್ರಿಟಿಷರ ಜೈಲುವಾಸವನ್ನೂ ಅನುಭವಿಸಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡಿದ್ದ ಅವರಿಗೆ ಸರ್ಕಾರ ಮಾರ್ನಬೈಲಿನಲ್ಲಿ ಜಾಗ ನೀಡಿತ್ತು. ಅಲ್ಲಿಯೇ ಅವರು ಹಲವು ವರ್ಷಗಳ ಕಾಲ ನೆಲೆಸಿದ್ದರು.
ಹೀಗಾಗಿ ‘ಅಹಿಂಸಾ ಮನೆ’ ಕೇವಲ ಬಾಳಪ್ಪರ ವಾಸದ ಸ್ಥಳವಾಗಿರಲಿಲ್ಲ. ಅವರ ಹೋರಾಟದ ಬದುಕಿನ ಕೊನೆಯ ಅಧ್ಯಾಯಗಳಿಗೆ ಸಾಕ್ಷಿಯಾಗಿದ್ದ ಪ್ರಮುಖ ತಾಣವಾಗಿತ್ತು.

ಮ್ಯೂಸಿಯಂ ಆಗಲಿ ಎಂಬ ಕುಟುಂಬದ ಆಶಯ
ಬಾಳಪ್ಪರ ಹೆಸರು ಹಾಗೂ ಅವರ ಆದರ್ಶಗಳು ಮುಂದಿನ ಪೀಳಿಗೆಗೂ ಪರಿಚಯವಾಗಬೇಕು ಎಂಬ ಆಶಯ ಕುಟುಂಬಸ್ಥರಲ್ಲಿದೆ. ಅವರು ಕೊನೆಯ ದಿನಗಳನ್ನು ಕಳೆದ ‘ಅಹಿಂಸಾ ಮನೆ’ಯನ್ನೇ ಸ್ಮರಣಾ ಕೇಂದ್ರ ಅಥವಾ ಮ್ಯೂಸಿಯಂ ಆಗಿ ರೂಪಿಸುವ ಯೋಚನೆಯೂ ಕುಟುಂಬದಲ್ಲಿದೆ.
ಬಾಳಪ್ಪರು ಬರೆದ ಪುಸ್ತಕಗಳು, ಅಪರೂಪದ ಭಾವಚಿತ್ರಗಳು, ಅವರು ಬಳಸುತ್ತಿದ್ದ ವಸ್ತುಗಳು, ಸ್ವಾತಂತ್ರ್ಯ ಹೋರಾಟದ ದಿನಗಳ ನೆನಪುಗಳು ಹಾಗೂ ಅವರೊಂದಿಗೆ ಬದುಕು ಹಂಚಿಕೊಂಡವರ ಸ್ಮರಣಿಕೆಗಳನ್ನು ಒಂದೆಡೆ ಸಂಗ್ರಹಿಸಿ ಇಡುವ ಮೂಲಕ ಈ ಮನೆಯನ್ನು ಒಂದು ಐತಿಹಾಸಿಕ ತಾಣವನ್ನಾಗಿ ರೂಪಿಸಬಹುದು ಎಂಬ ಆಶಯ ವ್ಯಕ್ತವಾಗಿದೆ.
ಇದು ಕೇವಲ ಒಂದು ಹಳೆಯ ಮನೆಯನ್ನು ಸಂರಕ್ಷಿಸುವ ಕಾರ್ಯವಾಗುವುದಿಲ್ಲ. ಬದಲಾಗಿ, ಒಬ್ಬ ಸ್ವಾತಂತ್ರ್ಯ ಹೋರಾಟಗಾರನ ಬದುಕು, ಹೋರಾಟ ಮತ್ತು ಆದರ್ಶಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಜೀವಂತ ಪಾಠಶಾಲೆಯಾಗಬಹುದು.
ಮತ್ತೆ ಬಾಗಿಲು ತೆರೆಯಲಿ ‘ಅಹಿಂಸಾ ಮನೆ’
‘ಅಹಿಂಸಾ ಮನೆ’ ಮತ್ತೆ ಬಾಗಿಲು ತೆರೆಯಬೇಕು. ವರ್ಷಕ್ಕೊಮ್ಮೆಯಾದರೂ ಕುಟುಂಬಸ್ಥರು, ಅಭಿಮಾನಿಗಳು, ಹೋರಾಟಗಾರರು ಹಾಗೂ ಸಾರ್ವಜನಿಕರು ಇಲ್ಲಿ ಸೇರಿ ಬಾಳಪ್ಪರ ಬದುಕು ಮತ್ತು ಆದರ್ಶಗಳನ್ನು ಸ್ಮರಿಸುವಂತಾಗಬೇಕು ಎಂಬ ಆಶಯವೂ ಇದೆ.
ಈ ಕುರಿತು ಅವರ ಮೊಮ್ಮಗ ರವೀಂದ್ರ ಮಾತನಾಡಿದ್ದು, “ಕುಟುಂಬದ ಎಲ್ಲ ಸದಸ್ಯರು ಒಟ್ಟಾಗಿ ಕೂತು ಚರ್ಚೆ ಮಾಡಿ ಮುಂದಿನ ನಿರ್ಧಾರ ಕೈಗೊಳ್ಳಬೇಕು. ಬಾಳಪ್ಪರ ನೆನಪು ಉಳಿಯುವ ರೀತಿಯಲ್ಲಿ ಏನಾದರೂ ಮಾಡಬೇಕು ಎಂಬ ಯೋಚನೆ ಇದೆ” ಎಂದು ತಿಳಿಸಿದ್ದಾರೆ.
ಇಂದು ಮಾರ್ನಬೈಲಿನ ರಸ್ತೆಯಲ್ಲಿ ಸಾಗುವವರಿಗೆ ‘ಅಹಿಂಸಾ ಮನೆ’ ಬೀಗ ಹಾಕಿದ ಹಳೆಯ ಮನೆಯಂತೆ ಕಾಣಬಹುದು. ಆದರೆ ಅದರೊಳಗೆ ಒಂದು ಯುಗದ ನೆನಪುಗಳಿವೆ.
ದೇಶಕ್ಕಾಗಿ ಹೋರಾಡಿದ ಯುವಕನ ಹೆಜ್ಜೆಗಳಿವೆ. ಸಮಾಜಕ್ಕಾಗಿ ಬದುಕಿದ ಚಿಂತಕನ ಕನಸುಗಳಿವೆ. ಜನರಿಗಾಗಿ ಧ್ವನಿ ಎತ್ತಿದ ಹೋರಾಟಗಾರನ ನೆನಪುಗಳಿವೆ.
ಕಾಲ ಬದಲಾಗಿದೆ. ಮನೆ ಮೌನವಾಗಿದೆ. ಪೊದೆಗಳು ಆವರಿಸಿವೆ. ಬಾಗಿಲಿಗೆ ಬೀಗ ಬಿದ್ದಿದೆ. ಆದರೆ ಬಾಳಪ್ಪರ ನೆನಪುಗಳಿಗೆ ಬೀಗ ಹಾಕಲು ಸಾಧ್ಯವಿಲ್ಲ.
‘ಅಹಿಂಸಾ ಮನೆ’ ಮತ್ತೆ ತೆರೆದುಕೊಳ್ಳುವ ದಿನಕ್ಕಾಗಿ ಮಾರ್ನಬೈಲಿನ ಆ ಮನೆ ಕಾಯುತ್ತಿರುವಂತಿದೆ. ಅದು ಕೇವಲ ಮನೆಯ ಬಾಗಿಲು ತೆರೆಯುವ ನಿರೀಕ್ಷೆಯಲ್ಲ… ಒಂದು ಹೋರಾಟದ ಇತಿಹಾಸ ಮತ್ತೆ ಜನರ ಮುಂದೆ ತೆರೆದುಕೊಳ್ಳುವ ನಿರೀಕ್ಷೆ.



