ಕಡೆಪಾಲ ಬಳಿ ನಿಗೂಢವಾಗಿ ಕೊಲೆಯಾಗಿದ್ದ ಫಾತಿಮಾ ನಿಶಾನ ಕೊಲೆ ಪ್ರಕರಣದ ಇಬ್ಬರು ಆರೋಪಿಗಳಿಗೆ ಪುತ್ತೂರು ಐದನೇ ಹೆಚ್ಚುವರಿ ಸತ್ರ ನ್ಯಾಯಾಲಯ ಶರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಜುಲೈ 18ರಂದು ರಾತ್ರಿ ಫಾತಿಮಾ ನಿಶಾನ ಅವರಿಗೆ ಮಾವ ಅಲವಿ, ಅತ್ತೆ ಆಯಿಷಾ ಹಾಗೂ ನಾದಿನಿ ಫಸೀಲಾ ಹಿಂಸೆ ನೀಡಿ ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಸುಳ್ಯ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು.
ಬಂಧನದ ಬಳಿಕ ಆರೋಪಿಗಳನ್ನು ಸುಳ್ಯ ಹಿರಿಯ ನ್ಯಾಯಾಧೀಶರು ಹಾಗೂ ಜೆಎಂಎಫ್‌ಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಬಳಿಕ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿತ್ತು.
ಈ ಪ್ರಕರಣದಲ್ಲಿ ಆಯಿಷಾ ಮತ್ತು ಫಸೀಲಾ ಪರವಾಗಿ ಪುತ್ತೂರು ಐದನೇ ಹೆಚ್ಚುವರಿ ಸತ್ರ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪಿಗಳಿಗೆ ಶರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಆರೋಪಿಗಳ ಪರವಾಗಿ ಸುಳ್ಯದ ಹಿರಿಯ ನ್ಯಾಯವಾದಿ ಎಂ. ವೆಂಕಪ್ಪ ಗೌಡ, ಚಂಪಾ ವಿ. ಗೌಡ, ರಾಜೇಶ್ ಬಿ.ಜಿ., ಶ್ಯಾಮ್ ಪ್ರಸಾದ್ ಎನ್.ಕೆ. ಹಾಗೂ ವಿಮಲೇಶ್ ಆರ್. ಗೌಡ ಅವರು ವಾದಿಸಿದ್ದರು ಎಂದು ತಿಳಿದುಬಂದಿದೆ.



