ನಗರದ ಹಂಪನಕಟ್ಟೆಯ ವಿಶ್ವವಿದ್ಯಾಲಯ ಕಾಲೇಜಿನಲ್ಲೇ ತುಳು ಎಂ.ಎ. ಅಧ್ಯಯನ ಕೇಂದ್ರವನ್ನು ಮುಂದುವರಿಸಬೇಕು ಹಾಗೂ ಮಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತುಳುವನ್ನು ರಾಜ್ಯದ ಅಧಿಕೃತ ಭಾಷೆಯನ್ನಾಗಿ ಘೋಷಿಸಬೇಕು ಎಂದು ‘ಪರಪು’ ತುಳು ಎಂ.ಎ. ಹಿರಿಯ ವಿದ್ಯಾರ್ಥಿಗಳ ಸಂಘ ಆಗ್ರಹಿಸಿದೆ.

ಮಂಗಳೂರು ವಿಶ್ವವಿದ್ಯಾಲಯವು 2018ರಲ್ಲಿ ಉತ್ತಮ ಪಠ್ಯಕ್ರಮ ರೂಪಿಸಿ, ಹಂಪನಕಟ್ಟೆಯ ವಿಶ್ವವಿದ್ಯಾಲಯ ಕಾಲೇಜಿನಲ್ಲಿ ತುಳು ಸ್ನಾತಕೋತ್ತರ ಅಧ್ಯಯನ ಕೇಂದ್ರ ಆರಂಭಿಸಿತ್ತು. ಈ ಮೂಲಕ ತುಳು ಭಾಷಾ ಅಧ್ಯಯನಕ್ಕೆ ಶೈಕ್ಷಣಿಕ ಸ್ವರೂಪ ನೀಡಲಾಗಿತ್ತು. ಏಳು ಬ್ಯಾಚ್ಗಳಲ್ಲಿ ಸುಮಾರು 150 ಮಂದಿ ತುಳು ಎಂ.ಎ. ಅಧ್ಯಯನ ಮಾಡಿದ್ದಾರೆ.
ಆದರೆ, ಬಳಿಕ ಕೋರ್ಸ್ನ್ನು ಹಂಪನಕಟ್ಟೆಯ ವಿಶ್ವವಿದ್ಯಾಲಯ ಕಾಲೇಜಿನಿಂದ ಕೊಣಾಜೆಯ ವಿಶ್ವವಿದ್ಯಾಲಯ ಕ್ಯಾಂಪಸ್ಗೆ ಸ್ಥಳಾಂತರಿಸಿದ ಬಳಿಕ ಪ್ರವೇಶಾತಿ ಶೂನ್ಯವಾಗಿದೆ ಎಂದು ಸಂಘ ತಿಳಿಸಿದೆ. ಹೀಗಾಗಿ ತುಳು ಭಾಷೆಯ ಬೆಳವಣಿಗೆ ಹಾಗೂ ಆಸಕ್ತರಿಗೆ ಅಧ್ಯಯನದ ಅವಕಾಶ ಕಲ್ಪಿಸುವ ದೃಷ್ಟಿಯಿಂದ ಹಂಪನಕಟ್ಟೆಯಲ್ಲಿರುವ ತುಳು ಎಂ.ಎ. ಅಧ್ಯಯನ ಕೇಂದ್ರವನ್ನು ತಕ್ಷಣ ಪುನರಾರಂಭಿಸಿ ಶಾಶ್ವತವಾಗಿ ಮುಂದುವರಿಸಬೇಕು ಎಂದು ‘ಪರಪು’ ಅಧ್ಯಕ್ಷ ಸುಭಾಷ್ಚಂದ್ರ ಕಣ್ವತೀರ್ಥ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ‘ಪರಪು’ ಉಪಾಧ್ಯಕ್ಷ ಹರೀಶ ಎ., ಸದಸ್ಯರಾದ ಗೀತಾ ಜೈನ್, ಭಾಗ್ಯಶ್ರೀ ಶೆಟ್ಟಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.



