ಪರಿವಾರ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ನ ರಜತ ಮಹೋತ್ಸವದ ಸಂಭ್ರಮ ಹಾಗೂ ನೂತನ ಪ್ರಧಾನ ಕಚೇರಿಯ ಉದ್ಘಾಟನಾ ಸಮಾರಂಭ ಅಕ್ಟೋಬರ್ 24ರಂದು ಸಂಜೆ 4.30ಕ್ಕೆ ಉಡುಪಿಯ ಜೋಡುಕಟ್ಟೆಯ ಆಶ್ರಯ ಟವರ್ಸ್ನಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ, ಮಾಜಿ ಶಾಸಕ ಕೆ. ರಘುಪತಿ ಭಟ್ ತಿಳಿಸಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರತೀರ್ಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದು, ಹಿರಿಯ ಸಹಕಾರಿ ಶಂಭು ಶೆಟ್ಟಿ ದೀಪಪ್ರಜ್ವಲನೆ ನೆರವೇರಿಸಲಿದ್ದಾರೆ ಎಂದು ತಿಳಿಸಿದರು.
2000ನೇ ಇಸವಿಯಲ್ಲಿ ಶಿವಪಾಡಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ ಹೆಸರಿನಲ್ಲಿ ಆರಂಭಗೊಂಡ ಸಂಸ್ಥೆ, ಬಳಿಕ ಪರಿವಾರ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ ಎಂಬ ಹೆಸರಿನಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಇದೀಗ 25 ವರ್ಷಗಳ ಪಯಣವನ್ನು ಪೂರ್ಣಗೊಳಿಸಿರುವ ಸಂಸ್ಥೆ, ಸ್ವಂತ ಹವಾನಿಯಂತ್ರಿತ ಕಟ್ಟಡದಲ್ಲಿ ಪ್ರಧಾನ ಕಚೇರಿಯನ್ನು ಆರಂಭಿಸುವ ಮೂಲಕ ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ನಿರ್ದೇಶಕರಾದ ಸುರೇಶ್ ಪ್ರಭು, ಗಣೇಶ್ ಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.



