ವಾಣಿಜ್ಯ ಮತ್ತು ಕೈಗಾರಿಕಾ ಉದ್ದೇಶಗಳ ಅನಿಲ ವ್ಯವಸ್ಥೆ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಪುಣೆ ಗ್ಯಾಸ್ ಸಂಸ್ಥೆಯು ಮಂಗಳೂರಿನಲ್ಲಿ ತನ್ನ ನೂತನ ಪುಣೆ ಗ್ಯಾಸ್ ಎಕ್ಸ್ಪೀರಿಯನ್ಸ್ ಸೆಂಟರ್ ಆರಂಭಿಸಿದೆ. ಇದು ಸಂಸ್ಥೆಯ 10ನೇ ಅನುಭವ ಕೇಂದ್ರವಾಗಿದ್ದು, ಕರ್ನಾಟಕದಲ್ಲಿ ಎರಡನೇ ಕೇಂದ್ರವಾಗಿದೆ. ಈಗಾಗಲೇ ಬೆಂಗಳೂರಿನಲ್ಲಿ ಸಂಸ್ಥೆಯ ಎಕ್ಸ್ಪೀರಿಯನ್ಸ್ ಸೆಂಟರ್ ಕಾರ್ಯನಿರ್ವಹಿಸುತ್ತಿದೆ.

ಮಂಗಳೂರು ಉರ್ವ ಮಾರಿಗುಡಿ ಸಮೀಪದ ಲೋಟಸ್ ಅಥರ್ವ ವಾಣಿಜ್ಯ ಸಂಕೀರ್ಣದಲ್ಲಿರುವ ವಿಂದ್ಯಾ ಅಪ್ಲಯನ್ಸ್ನಲ್ಲಿ ನೂತನ ಕೇಂದ್ರ ಕಾರ್ಯನಿರ್ವಹಿಸಲಿದೆ. ಪುಣೆ ಗ್ಯಾಸ್ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಮತ್ತು ಸಿಇಒ ಜೇಸಲ್ ಸಂಪತ್ ಅವರು ಕೇಂದ್ರವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ವಿಂದ್ಯಾ ಅಪ್ಲಯನ್ಸ್ನ ನಿತ್ಯಾನಂದ ಪೈ ಹಾಗೂ ಮಂಗಳೂರಿನ ಹೋಟೆಲ್ ಉದ್ಯಮದ ಪ್ರಮುಖ ಗಣ್ಯರು ಉಪಸ್ಥಿತರಿದ್ದರು.
ವಾಣಿಜ್ಯ ಅಡುಗೆ ಅನಿಲ ಬಳಕೆಯಲ್ಲಿ ಕ್ಷಮತೆ, ಸುರಕ್ಷತೆ ಮತ್ತು ನಿಖರ ಎಂಜಿನಿಯರಿಂಗ್ ತಂತ್ರಜ್ಞಾನ ಸೇವೆಗಳನ್ನು ಈ ಕೇಂದ್ರದ ಮೂಲಕ ಮಂಗಳೂರಿಗೆ ವಿಸ್ತರಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೋಟೆಲ್, ಆತಿಥ್ಯ, ಮತ್ಸ್ಯೋದ್ಯಮ ಮತ್ತು ಆಹಾರ ಸಂಸ್ಕರಣೆಯಂತಹ ವೈವಿಧ್ಯಮಯ ಉದ್ಯಮಗಳು ಬೆಳವಣಿಗೆ ಹೊಂದಿವೆ. ಅನಿಲ ಆಧಾರಿತ ಉದ್ಯಮಗಳ ಸಂಖ್ಯೆಯೂ ಹೆಚ್ಚಿರುವುದರಿಂದ ವಹಿವಾಟು ವಿಸ್ತರಣೆಗೆ ಮಂಗಳೂರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಸ್ಥೆ ತಿಳಿಸಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಜೇಸಲ್ ಸಂಪತ್, “ಅನಿಲ ಬಳಕೆಯ ಕ್ಷಮತೆಯನ್ನು ಹೆಚ್ಚಿಸುವ ಮೂಲಕ ಉದ್ಯಮಗಳು ತಮ್ಮ ಕಾರ್ಯಾಚರಣೆಯ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡಬಹುದು. ಪುಣೆ ಗ್ಯಾಸ್ನ ಎಂಜಿನಿಯರಿಂಗ್ ಪರಿಹಾರಗಳು ದೇಶಾದ್ಯಂತದ ಉದ್ಯಮಗಳಿಗೆ ವಾರ್ಷಿಕವಾಗಿ 1,400 ಕೋಟಿ ರೂ.ಗಳಿಗೂ ಹೆಚ್ಚಿನ ಉಳಿತಾಯಕ್ಕೆ ನೆರವಾಗಿವೆ. ಮಂಗಳೂರಿನ ಹಲವು ಪ್ರಮುಖ ಉದ್ಯಮಗಳಿಗೆ ಈಗಾಗಲೇ ಸಂಸ್ಥೆ ಸೇವೆ ನೀಡುತ್ತಿದ್ದು, ವಹಿವಾಟು ವಿಸ್ತರಣೆಯ ಉದ್ದೇಶದಿಂದ ನೂತನ ಅನುಭವ ಕೇಂದ್ರ ಆರಂಭಿಸಲಾಗಿದೆ” ಎಂದರು.
ವಿಂದ್ಯಾ ಅಪ್ಲಯನ್ಸ್ನ ನಿತ್ಯಾನಂದ ಪೈ ಮಾತನಾಡಿ, “ಕರ್ನಾಟಕದಲ್ಲಿ ಪ್ರತಿನಿತ್ಯ ಸರಾಸರಿ 850 ಮೆಟ್ರಿಕ್ ಟನ್ ಎಲ್ಪಿಜಿಗೆ ಬೇಡಿಕೆಯಿದೆ. ಇದು ಸುಮಾರು 44 ಸಾವಿರ ವಾಣಿಜ್ಯ ಎಲ್ಪಿಜಿ ಸಿಲಿಂಡರ್ಗಳಿಗೆ ಸಮಾನವಾಗಿದೆ. ಅನಿಲ ವಿತರಣೆ, ಸುರಕ್ಷತೆ ಮತ್ತು ಕ್ಷಮತೆ ಕ್ಷೇತ್ರದಲ್ಲಿ ಇದರಿಂದ ವಿಪುಲ ಅವಕಾಶಗಳಿವೆ. ಪುಣೆ ಗ್ಯಾಸ್ನ ವ್ಯವಸ್ಥೆಗಳು ಎಲ್ಪಿಜಿ ಬಳಕೆಯ ಕ್ಷಮತೆಯನ್ನು ಹೆಚ್ಚಿಸುವುದರ ಜೊತೆಗೆ ಅನಿಲ ವ್ಯರ್ಥವಾಗುವುದನ್ನು ತಡೆಯುತ್ತವೆ” ಎಂದು ತಿಳಿಸಿದರು.
ನೂತನ ಎಕ್ಸ್ಪೀರಿಯನ್ಸ್ ಸೆಂಟರ್ನಲ್ಲಿ ಪುಣೆ ಗ್ಯಾಸ್ನ ಡ್ರೈ ಟೈಪ್ ಎಲ್ಪಿಜಿ ವೆಪೊರೈಸರ್, ಎಲ್ಪಿ ಜೀನಿಯಸ್ ಸ್ಮಾರ್ಟ್ ಎಲ್ಪಿಜಿ ಸಿಸ್ಟಮ್, ಫ್ಯೂಯೆಲ್ ಫ್ಯೂಷನ್, ಲೀಕ್ ಚೆಕ್ ಮತ್ತು ಹ್ಯಾಂಡ್ಹೆಲ್ಡ್ ಸ್ನಿಫರ್, ಗ್ಯಾಸ್ಟ್ರೈನ್ ಪ್ರೆಷರ್ ರೆಗ್ಯುಲೇಷನ್ ಸಿಸ್ಟಮ್ ಸೇರಿದಂತೆ ವಿವಿಧ ತಂತ್ರಜ್ಞಾನ ಉತ್ಪನ್ನಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಗ್ರಾಹಕರು ಈ ಉತ್ಪನ್ನಗಳನ್ನು ನೇರವಾಗಿ ವೀಕ್ಷಿಸಿ ಅವುಗಳ ಕಾರ್ಯವೈಖರಿ ಹಾಗೂ ಬಳಕೆಯ ವಿಧಾನವನ್ನು ತಿಳಿದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.



