ಹಸಿ ಮೀನುಗಳ ಸಂರಕ್ಷಣೆಗಾಗಿ ಬಳಸಲಾಗುವ ಮಂಜುಗಡ್ಡೆಯ ಗುಣಮಟ್ಟ ಪರಿಶೀಲಿಸುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿ ಡಾ. ಪ್ರವೀಣ್ ಕುಮಾರ್ ಸಿಎಚ್ ಅವರ ತಂಡ ಜಿಲ್ಲೆಯ ಮಂಜುಗಡ್ಡೆ ತಯಾರಿಕಾ ಘಟಕಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಮಂಗಳೂರಿನ ಬಂದರು ಧಕ್ಕೆಯಲ್ಲಿರುವ ಮಂಜುಗಡ್ಡೆ ತಯಾರಿಕಾ ಘಟಕಗಳಿಗೆ ಭೇಟಿ ನೀಡಿದ ಅಧಿಕಾರಿಗಳು, ಅಲ್ಲಿಂದ ಮಂಜುಗಡ್ಡೆಯ ಮಾದರಿಗಳನ್ನು ಸಂಗ್ರಹಿಸಿದರು.

ಈ ಘಟಕಗಳಲ್ಲಿ ನೀರಿನ ಟ್ಯಾಂಕರ್ಗಳ ಮೂಲಕ ಸಿಹಿನೀರನ್ನು ಖರೀದಿಸಿ ಮಂಜುಗಡ್ಡೆ ತಯಾರಿಸಲಾಗುತ್ತಿರುವುದು ಪರಿಶೀಲನೆ ವೇಳೆ ಗಮನಕ್ಕೆ ಬಂದಿದೆ. ಮಂಜುಗಡ್ಡೆ ತಯಾರಿಕೆಗೆ ಬಳಸುವ ನೀರಿನ ಪ್ರಯೋಗಾಲಯ ವರದಿಗಳನ್ನು ಪಡೆದು, ನೀರಿನ ಗುಣಮಟ್ಟ ಖಚಿತಪಡಿಸಿಕೊಂಡ ಬಳಿಕವೇ ಮಂಜುಗಡ್ಡೆ ತಯಾರಿಸುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಅಲ್ಲದೆ, ಮೀನುಗಳ ಸಂರಕ್ಷಣೆಗಾಗಿ ಫಾರ್ಮಲಿನ್ ಅಥವಾ ಇನ್ಯಾವುದೇ ರಾಸಾಯನಿಕಗಳನ್ನು ಬಳಸಬಾರದು ಎಂದು ಘಟಕದ ಮಾಲೀಕರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದೆ. ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಆಹಾರ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಲಾಗಿದೆ.



