ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರನ್ನು ಪತ್ನಿಯ ಎದುರೇ ಐದಾರು ಮಂದಿಯ ತಂಡ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಬರ್ಬರವಾಗಿ ಹತ್ಯೆಗೈದ ಘಟನೆ ಶುಕ್ರವಾರ ಬೆಳಗ್ಗೆ ಬೆಂಗಳೂರಿನ ಯಲಹಂಕ ನ್ಯೂಟೌನ್‌ನ ಶೇಷಾದ್ರಿಪುರಂ ಕಾಲೇಜು ಸಮೀಪ ನಡೆದಿದೆ.

ಹತ್ಯೆಯಾದ ಉದ್ಯಮಿಯನ್ನು 39 ವರ್ಷದ ಚರಣ್ ಗೌಡ ಎಂದು ಗುರುತಿಸಲಾಗಿದೆ. ಇವರು ಧಣಿ ಪ್ರಾಪರ್ಟೀಸ್ ಸಂಸ್ಥೆಯ ಮಾಲೀಕರಾಗಿದ್ದು, ಪಂಜಾಬ್ ನ್ಯಾಷನಲ್ ಬ್ಯಾಂಕ್ ಕಟ್ಟಡದ ಮೇಲಿನ ಮಹಡಿಯಲ್ಲಿ ಕಚೇರಿ ಹೊಂದಿದ್ದರು.

ಶುಕ್ರವಾರ ಬೆಳಗ್ಗೆ ಸುಮಾರು 10.45ರ ವೇಳೆಗೆ ಚರಣ್ ಗೌಡ ಅವರು ಪತ್ನಿಯೊಂದಿಗೆ ಮನೆಯಿಂದ ಕಚೇರಿಗೆ ಆಗಮಿಸಿದ್ದರು. ಈ ವೇಳೆ ಕಚೇರಿಯತ್ತ ತೆರಳುತ್ತಿದ್ದ ಪತ್ನಿಗಾಗಿ ಕಾಯುತ್ತಿದ್ದ ಐದಾರು ಮಂದಿಯ ದುಷ್ಕರ್ಮಿಗಳ ತಂಡ, ಚರಣ್ ಗೌಡ ಅವರ ಮೇಲೆ ಏಕಾಏಕಿ ದಾಳಿ ನಡೆಸಿದೆ. ಮಾರಕಾಸ್ತ್ರಗಳಿಂದ ತಲೆಗೆ ಬಲವಾಗಿ ಹೊಡೆದು ಮನಬಂದಂತೆ ಹಲ್ಲೆ ನಡೆಸಿ ಹತ್ಯೆಗೈದ ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಪತಿಯ ಕಣ್ಣೆದುರೇ ನಡೆದ ಹತ್ಯೆಯಿಂದ ಪತ್ನಿ ಆಘಾತಕ್ಕೊಳಗಾಗಿ ಸ್ಥಳದಲ್ಲೇ ಕಣ್ಣೀರಿಟ್ಟು ಆಕ್ರಂದನಗೈದಿದ್ದಾರೆ. ‘ಕಾರು ತೆಗೆಯಿರಿ, ಹೋಗೋಣ’ ಎಂದು ಪತಿಯನ್ನು ಕರೆದರೂ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಅವರು ಕಂಗಾಲಾಗಿದ್ದಾರೆ ಎನ್ನಲಾಗಿದೆ.
ಹಳೆ ದ್ವೇಷದ ಹಿನ್ನೆಲೆಯಲ್ಲಿ ಈ ಹತ್ಯೆ ನಡೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು, ಸುಮಾರು 22 ವರ್ಷದ ಯುವಕರ ತಂಡ ಕೃತ್ಯ ಎಸಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಘಟನಾ ಸ್ಥಳಕ್ಕೆ ಯಲಹಂಕ ಟೌನ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳ ಪತ್ತೆಗಾಗಿ ತನಿಖೆ ಮುಂದುವರಿದಿದೆ.



