ಬಂಟ್ವಾಳ: ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆಯ ಔಷಧಿಯ ಖರ್ಚಿಗಾಗಿ ಬಂಟ್ವಾಳ ಗ್ರಾಮಾಂತರ ಪೊಲೀಸರು ಧನ ಸಹಾಯ ಮಾಡಿ, ಮಾನವೀಯತೆ ಮೆರೆದಿದ್ದಾರೆ.

ಠಾಣೆಯ ಕೆಲಸಕ್ಕಾಗಿ ಬರುತ್ತಿದ್ದ ವನಿತಾ ಎಂಬ ಮಹಿಳೆಗೆ ಬಂಟ್ವಾಳ ಗ್ರಾಮಾಂತರ ಎಸ್.ಐ.ಹರೀಶ್ ನೇತೃತ್ವದಲ್ಲಿ ಸುಮಾರು 27,000 ಸಾವಿರ ನಗದು ಹಣವನ್ನು ನೀಡಿ, ಸಹಾಯ ಹಸ್ತ ಚಾಚಿದ್ದಾರೆ. ಬಂಟ್ವಾಳ ಪೇಟೆ ನಿವಾಸಿಯಾಗಿರುವ ವನಿತ ಅವರು ತೀರಾ ಬಡತನದ ಕುಟುಂಬದಲ್ಲಿ ಜೀವನ ನಡೆಸುತ್ತಿದ್ದು, ಅವರು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಶುಚಿತ್ವದ ಕೆಲಸ ಮಾಡುತ್ತಿದ್ದರು.
ಆದರೆ ವನಿತಾರವರು ಇತ್ತೀಚೆಗೆ ಮನೆಯ ಸಮೀಪ ಬಿದ್ದ ಪರಿಣಾಮ ಕೈ ಮೂಳೆ ಮುರಿತಕ್ಕೆ ಒಳಗಾಗಿ ಕೆಲಸಕ್ಕೆ ಬರಲು ಅಸಾಧ್ಯವಾಗಿತ್ತು.
ತೀರಾ ಬಡತನದಲ್ಲಿರುವ ವನಿತಾ ಅವರಿಗೆ ಕೆಲಸ ಮಾಡಿದರೆ ಮೂರು ಹೊತ್ತು ಊಟ ಎಂಬ ಪರಿಸ್ಥಿತಿ, ಹಾಗಾಗಿ ಕಳೆದ ಕೆಲವು ತಿಂಗಳ ಕಾಲ ದುಡಿಮೆ ಇಲ್ಲದೆ ಕಷ್ಟದ ಸ್ಥಿತಿಯಲ್ಲಿರುವ ವಿಚಾರ ಪೊಲೀಸರ ಗಮನಕ್ಕೆ ಬಂದಿತು.
ಇದೀಗ ಬಂಟ್ವಾಳ ಪೊಲೀಸರು ವನಿತಾ ಅವರ ಮನೆಯ ಖರ್ಚಿಗಾಗಿ ಠಾಣೆಯಲ್ಲಿ ಸಿಬ್ಬಂದಿಗಳಿಂದ ಒಟ್ಟುಗೂಡಿಸಿದ ನಗದು ಹಣವನ್ನು ಅವರಿಗೆ ಹಸ್ತಾಂತರ ಮಾಡಿ, ಮಾನವೀಯ ಕಾರ್ಯ ಮಾಡಿದ್ದಾರೆ.



