ಜನ ಮನದ ನಾಡಿ ಮಿಡಿತ

Advertisement

ಬೆಂಗಳೂರು: “ವಿದ್ಯಾರ್ಥಿಯ ಶಿಕ್ಷಣದ ಹಕ್ಕಿಗೆ ಧಕ್ಕೆ ಉಂಟಾಗದಂತೆ ಸಂಸ್ಥೆಗಳು ಸೂಕ್ಷ್ಮತೆಯಿಂದ ವರ್ತಿಸಬೇಕು”

ಶೈಕ್ಷಣಿಕ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಧಾರ್ಮಿಕ ಹಾಗೂ ಸಾಂಪ್ರದಾಯಿಕ ಹಕ್ಕುಗಳನ್ನು ಗೌರವಿಸುವ ದಿಸೆಯಲ್ಲಿ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಯನ್ನು ಬ್ಯಾರಿಸ್ ಸೆಂಟ್ರಲ್ ಕಮಿಟಿಯು ಸ್ವಾಗತಿಸುತ್ತದೆ ಎಂದು ಬೆಂಗಳೂರಿನ ಬ್ಯಾರಿಸ್ ಸೆಂಟ್ರಲ್ ಕಮಿಟಿಯ ಅಧ್ಯಕ್ಷರಾದ ಶಬೀರ್ ಬ್ರಿಗೇಡ್ ಹೇಳಿದರು.

ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಸಾಮಾನ್ಯವಾಗಿ ಧರಿಸುವ ಪೇಟ/ಟರ್ಬನ್, ಜನಿವಾರ/ಪವಿತ್ರ ದಾರ, ಶಿವದಾರ, ರುದ್ರಾಕ್ಷಿ, ತಲೆವಸ್ತ್ರ/ಹಿಜಾಬ್ ಸೇರಿದಂತೆ ಸಾಂಪ್ರದಾಯಿಕ ಹಾಗೂ ಪದ್ಧತಿ ಆಧಾರಿತ ಸಂಕೇತಗಳನ್ನು ಶಿಸ್ತು, ಸುರಕ್ಷತೆ ಮತ್ತು ಗುರುತಿಸುವಿಕೆಗೆ ಅಡ್ಡಿಯಾಗದ ರೀತಿಯಲ್ಲಿ ಧರಿಸಲು ಅವಕಾಶ ಕಲ್ಪಿಸಿರುವುದು ಸಂವಿಧಾನಬದ್ಧ ಹಕ್ಕುಗಳಿಗೆ ಗೌರವ ನೀಡಿದಂತಾಗಿದೆ. ವಿಶೇಷವಾಗಿ, ಇಂತಹ ಸೀಮಿತ ಸಾಂಪ್ರದಾಯಿಕ ಅಥವಾ ಧಾರ್ಮಿಕ ಸಂಕೇತಗಳನ್ನು ಧರಿಸಿರುವ ಕಾರಣಕ್ಕೆ ಯಾವುದೇ ವಿದ್ಯಾರ್ಥಿಗೆ ಶಿಕ್ಷಣ ಸಂಸ್ಥೆ, ತರಗತಿ ಕೊಠಡಿ, ಪರೀಕ್ಷಾ ಕೇಂದ್ರ ಅಥವಾ ಇತರೆ ಶೈಕ್ಷಣಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದನ್ನು ನಿರಾಕರಿಸಬಾರದು ಎಂಬ ಸ್ಪಷ್ಟ ಸೂಚನೆ ಸಮಾನತೆ ಮತ್ತು ಶಿಕ್ಷಣದ ಹಕ್ಕನ್ನು ಬಲಪಡಿಸುತ್ತದೆ ಎಂದು ತಿಳಿಸಿದರು. ಬಳಿಕ ಮಾತನಾಡಿದ ಬಿಸಿಸಿಯ ಕಾನೂನು ಸಲಹೆಗಾರರಾದ ಅಡ್ವೊಕೇಟ್ ಖಲಂದರ್ ಕೊಯಿಲ, ವೈವಿಧ್ಯತೆಯೇ ಭಾರತದ ಶಕ್ತಿಯಾಗಿದ್ದು, ಶಿಕ್ಷಣ ಸಂಸ್ಥೆಗಳು ಸಹಿಷ್ಣುತೆ, ಪರಸ್ಪರ ಗೌರವ ಮತ್ತು ಸಂವಿಧಾನಿಕ ಮೌಲ್ಯಗಳನ್ನು ಬೆಳೆಸುವ ಕೇಂದ್ರಗಳಾಗಬೇಕು. ವಿದ್ಯಾರ್ಥಿಗಳ ಧಾರ್ಮಿಕ ಮತ್ತು ಸಾಂಸ್ಕೃತಿಕ ಗುರುತನ್ನು ಗೌರವಿಸುವ ಮೂಲಕ ಸಮಾನ ಹಾಗೂ ಒಳಗೊಂಡ ಶಿಕ್ಷಣ ವಾತಾವರಣ ನಿರ್ಮಾಣ ಸಾಧ್ಯ. ಈ ಮಾರ್ಗಸೂಚಿಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವಂತೆ ಸಂಬಂಧಿತ ಅಧಿಕಾರಿಗಳನ್ನು ಆಗ್ರಹಿಸಬೇಕು. ಜೊತೆಗೆ, ಯಾವುದೇ ವಿದ್ಯಾರ್ಥಿಯ ಶಿಕ್ಷಣ ಹಕ್ಕಿಗೆ ಧಕ್ಕೆ ಉಂಟಾಗದಂತೆ ಎಲ್ಲಾ ಶಿಕ್ಷಣ ಸಂಸ್ಥೆಗಳು ಸೂಕ್ಷ್ಮತೆಯಿಂದ ವರ್ತಿಸಬೇಕು ಎಂದು ಮನವಿ ಮಾಡುತ್ತೇವೆ ಎಂದು ತಿಳಿಸಿದರು. ಶಿಕ್ಷಣ ಸಂಸ್ಥೆಗಳು ವೈಚಾರಿಕತೆ, ವೈಜ್ಞಾನಿಕತೆ, ಸಮಾನತೆ, ಭ್ರಾತೃತ್ವ, ಘನತೆ, ಪರಸ್ಪರ ಗೌರವ ಮತ್ತು ಜಾತ್ಯತೀತ ದೃಷ್ಟಿಕೋನವನ್ನು ಉತ್ತೇಜಿಸಬೇಕು. ಸಾಂವಿಧಾನಿಕ ಅರ್ಥದಲ್ಲಿ ಜಾತ್ಯತೀತತೆ ಎಂದರೆ ವೈಯಕ್ತಿಕ ನಂಬಿಕೆಗಳಿಗೆ ವಿರುದ್ಧವಲ್ಲ ಬದಲಾಗಿ ಎಲ್ಲರಿಗೂ ಸಮಾನ ಗೌರವ ನೀಡುವಿಕೆ, ಸಾಂಸ್ಥಿಕ ನಿಷ್ಪಕ್ಷಪಾತತೆ ಮತ್ತು ತಾರತಮ್ಯ ರಹಿತ ವರ್ತನೆಯಾಗಿದೆ. ಸರ್ಕಾರವು ಸಾಂವಿಧಾನಿಕ ತತ್ವಗಳಿಗೆ ಅನುಗುಣವಾಗಿ ಎಲ್ಲಾ ಧರ್ಮ ಮತ್ತು ಸಂಪ್ರದಾಯಗಳ ಬಗ್ಗೆ ತಟಸ್ಥ ಮತ್ತು ಸಮಾನ ನಿಲುವು ಹೊಂದಿರಬೇಕಿದೆ. ಮುಸ್ಲಿಂ ಹೆಣ್ಣು ಮಕ್ಕಳು ಧರಿಸುವ ಹಿಜಾಬ್ ಮತ್ತು ನಖಾಬ್ ಬಗ್ಗೆ ಸಮಾಜದಲ್ಲಿ ವ್ಯವಸ್ಥಿತವಾಗಿ ಗೊಂದಲ ಸೃಷ್ಟಿ ಮಾಡಲಾಗಿದೆ. ನಖಾಬ್ ಬೇರೆಯೇ, ಹಿಜಾಬ್ ಬೇರೆಯೇ ಎಂಬ ವಾಸ್ತವ ಸತ್ಯವನ್ನು ಮಾಧ್ಯಮಗಳು ಜನರಿಗೆ ತಿಳಿಸಬೇಕು ಎಂದು ಖಲಂದರ್ ಕೊಯಿಲ ಮನವಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಬ್ಯಾರಿಸ್ ಸೆಂಟ್ರಲ್ ಕಮಿಟಿಯ ಪದಾಧಿಕಾರಿ ಶಫೀಕ್ ಮಲ್ಲೇಶ್ವರಂ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಉಡುಪಿ: ಕೊಲೆ ಯತ್ನ ಪ್ರಕರಣದ ಇಬ್ಬರು ಆರೋಪಿಗಳ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ…!

ಉಡುಪಿ: ಉಡುಪಿಯಲ್ಲಿ ನಿಲ್ಲಿಸಿದ್ದ ಶ್ರೀ ದುರ್ಗಾಂಬ ಬಸ್ ಕಳವು: ಮುದ್ದಾಡಿ ಹಾಡಿಯಲ್ಲಿ ಪತ್ತೆ…!

ಮಂಗಳೂರು: ವಿದ್ಯಾರ್ಥಿಗಳ ಕೊರತೆಯಿಂದ ಮಂಗಳೂರು ವಿವಿಯ 16 ಪಿಜಿ ಕೋರ್ಸ್‌ಗಳು ಸ್ಥಗಿತ.

ಮಂಗಳೂರು: ಮಂಗಳೂರು-ಉಡುಪಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಹೊಸ ಆಶಾಕಿರಣ

ಮಂಗಳೂರು: ನ್ಯಾಯಾಧೀಶರ ಕಾರಿಗೆ ಗೂಡ್ಸ್ ಆಟೋ ಡಿಕ್ಕಿ: ಗಾಯಗೊಂಡಿದ್ದ ಚಾಲಕ ಸಾವು

ಕಠ್ಮಂಡು: ನೇಪಾಳದಲ್ಲಿ ಭಾರೀ ಮಳೆ, ಪ್ರವಾಹ-ಭೂಕುಸಿತಕ್ಕೆ 27 ಮಂದಿ ಬಲಿ; ನಾಲ್ವರು ನಾಪತ್ತೆ…!

ಕಾರ್ಕಳ: ಸುವರ್ಣ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರು ಮುಳುಗಿ ಮೃತ್ಯು…!

ಬಂಟ್ವಾಳ: ಮಾಣಿ ಭಾಗದಲ್ಲಿ ಮಾರ್ಗಸೂಚಿ ಫಲಕಗಳ ಕೊರತೆ: ವಾಹನ ಸವಾರರಿಗೆ ಗೊಂದಲ, ಅಪಘಾತದ ಆತಂಕ

ಬಂಟ್ವಾಳ: ಕಲ್ಲಡ್ಕ ಫ್ಲೈಓವರ್‌ನಲ್ಲಿ ದನ ಸಾಗಿಸುತ್ತಿದ್ದ ಲಾರಿ ತಡೆ: ಪೊಲೀಸರಿಂದ ವಾಹನ ವಶಕ್ಕೆ

error: Content is protected !!