ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಡಬ ತಾಲೂಕಿನ ಪೆರಬೆ ಗ್ರಾಮದ ಎರ್ಮಾಳ ಅರಣ್ಯ ಪ್ರದೇಶದಲ್ಲಿ ನಡೆದಿದೆ. ಮೃತರನ್ನು ಪೆರಬೆ ಗ್ರಾಮದ ಇಡಾಳ ಕೋಡಿಯಡ್ಕ ನಿವಾಸಿ ಶೇಖರ ಗೌಡ ಎಂದು ಗುರುತಿಸಲಾಗಿದೆ.

ಇತ್ತೀಚೆಗೆ ಸಂಸಾರದಲ್ಲಿ ಒಡಕು ಮೂಡಿ ಪತಿ-ಪತ್ನಿ ನಡುವೆ ಸಂಘರ್ಷ ಉಂಟಾಗಿತ್ತು. ಇದರಿಂದ ಮನನೊಂದು ಶೇಖರ ಗೌಡ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮೃತರ ಸಹೋದರ ಗಂಗಾಧರ ಅವರು ಕಡಬ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಶೇಖರ ಗೌಡ ಅವರು ಸಾಮಾಜಿಕವಾಗಿ ಗುರುತಿಸಿಕೊಂಡಿದ್ದು, ಸುರುಳಿ ಬಾಲಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆದ ಭಜನಾ ಕಾರ್ಯಕ್ರಮದಲ್ಲಿಯೂ ಭಾಗವಹಿಸಿದ್ದರು. ರಾತ್ರಿ ಎರ್ಮಾಳದಲ್ಲಿರುವ ತಮ್ಮ ಅಕ್ಕನ ಮನೆಯ ಪಕ್ಕ ಬೈಕ್ ನಿಲ್ಲಿಸಿ, ಬಳಿಕ ಅಲ್ಲಿಂದ ಸುಮಾರು ಒಂದೂವರೆ ಕಿಲೋಮೀಟರ್ ದೂರದಲ್ಲಿರುವ ಅರಣ್ಯ ಪ್ರದೇಶಕ್ಕೆ ತೆರಳಿದ್ದರು ಎನ್ನಲಾಗಿದೆ.
ರಾತ್ರಿ ಮನೆಗೆ ಮರಳದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಕಡಬ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಅಕ್ಕನ ಮನೆಯ ಬಳಿ ಬೈಕ್ ಪತ್ತೆಯಾಗಿದ್ದರಿಂದ ಸ್ಥಳೀಯರು ಸುತ್ತಮುತ್ತ ಹುಡುಕಾಟ ನಡೆಸಿದಾಗ ಅರಣ್ಯ ಪ್ರದೇಶದಲ್ಲಿ ಶೇಖರ ಗೌಡ ಅವರ ಮೃತದೇಹ ಪತ್ತೆಯಾಗಿದೆ.
ಕಡಬ ಠಾಣಾಧಿಕಾರಿ ಜಂಬುರಾಜ್ ಮಹಾಜನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.



