ಕಾಪು ತಾಲೂಕಿನ ಸುಭಾಷ್ ನಗರದಲ್ಲಿರುವ ಕೊಬ್ಬರಿ ಘಟಕವೊಂದರಲ್ಲಿ ಬೆಳಗ್ಗಿನ ಜಾವ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ಶಾರ್ಟ್ ಸರ್ಕಿಟ್‌ನಿಂದ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಕ್ಷಣಾರ್ಧದಲ್ಲೇ ಘಟಕದಲ್ಲಿದ್ದ ಕೊಬ್ಬರಿ ದಾಸ್ತಾನಿಗೆ ಬೆಂಕಿ ವ್ಯಾಪಿಸಿದೆ.

ಘಟನೆ ಗಮನಿಸಿದ ಸ್ಥಳೀಯರು ತಕ್ಷಣ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಮಾಹಿತಿ ಲಭಿಸಿದ ಕೂಡಲೇ ಉಡುಪಿ ಅಗ್ನಿಶಾಮಕ ದಳದ ಎರಡು ವಾಹನಗಳು ಸ್ಥಳಕ್ಕೆ ಧಾವಿಸಿದ್ದು, ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹಲವು ವರ್ಷಗಳಿಂದ ಈ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ನಳಿನಿ ಪುಷ್ಪಲತಾ ಸಾಲಿಯನ್ಸ್ ಅವರ ಮಾಲೀಕತ್ವದ ಕೊಬ್ಬರಿ ಘಟಕ ಇದಾಗಿದೆ. ಘಟಕದಲ್ಲಿ ದಾಸ್ತಾನು ಮಾಡಲಾಗಿದ್ದ ಅಪಾರ ಪ್ರಮಾಣದ ಕೊಬ್ಬರಿ ಬೆಂಕಿಗೆ ಆಹುತಿಯಾಗಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಕೊಬ್ಬರಿ ಸುಟ್ಟುಹೋಗಿದೆ.
ಆರಂಭಿಕ ಅಂದಾಜಿನ ಪ್ರಕಾರ ಸುಮಾರು 10ರಿಂದ 15 ಲಕ್ಷ ರೂಪಾಯಿ ನಷ್ಟ ಸಂಭವಿಸಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಅದೃಷ್ಟವಶಾತ್ ಅಗ್ನಿಶಾಮಕ ಸಿಬ್ಬಂದಿಯ ಸಮಯೋಚಿತ ಕಾರ್ಯಾಚರಣೆಯಿಂದ ಬೆಂಕಿ ಮತ್ತಷ್ಟು ವ್ಯಾಪಿಸುವುದನ್ನು ತಡೆಯಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಹಾಗೂ ನಷ್ಟದ ನಿಖರ ಪ್ರಮಾಣದ ಕುರಿತು ಪರಿಶೀಲನೆ ನಡೆಯುತ್ತಿದೆ.



