ಕುಂದಾಪುರ ತಾಲೂಕಿನ ಶಾನಾಡಿ ಮದಗದ ಕೊರಗ ಕಾಲೋನಿಯಲ್ಲಿ ವಿಕಲಚೇತನ ಮಗಳನ್ನು ಕೊಲೆಗೈದ ಬಳಿಕ ತಾಯಿಯೂ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ನಡೆದಿದೆ.

ಶಾನಾಡಿ ನಿವಾಸಿ ಸುಧಾಕರ ಕೊರಗ ಅವರ ಪುತ್ರಿ ಸುಪ್ರತಿ (ಹೆಸರು) ಕೊಲೆಯಾದ ಬಾಲಕಿ. ಅವರ ಪತ್ನಿ ನೇತ್ರಾವತಿ ಆತ್ಮಹತ್ಯೆ ಮಾಡಿಕೊಂಡವರು ಎಂದು ಗುರುತಿಸಲಾಗಿದೆ.
ಸುಧಾಕರ ಕೊರಗ ಅವರು ಕೂಲಿ ಕೆಲಸ ಮಾಡಿಕೊಂಡು ಕುಟುಂಬ ನಿರ್ವಹಿಸುತ್ತಿದ್ದರು. ದಂಪತಿಯ ಪುತ್ರಿ ಹುಟ್ಟಿನಿಂದಲೇ ವಿಕಲಚೇತನಳಾಗಿದ್ದು, ನಡೆಯಲು ಹಾಗೂ ಕುಳಿತುಕೊಳ್ಳಲು ಸಾಧ್ಯವಾಗದ ಸ್ಥಿತಿಯಲ್ಲಿದ್ದಳು ಎನ್ನಲಾಗಿದೆ. ಮಗಳ ಆರೈಕೆಯನ್ನು ತಾಯಿ ನೇತ್ರಾವತಿ ಮಾಡುತ್ತಿದ್ದರು. ದಂಪತಿಗೆ ಒಂದು ವರ್ಷದ ಗಂಡು ಮಗುವೂ ಇದೆ.

ಸುಧಾಕರ ಅವರು ಕೆಲಸಕ್ಕೆ ತೆರಳಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ನೇತ್ರಾವತಿ ಕತ್ತಿಯಿಂದ ಮಗಳ ಕುತ್ತಿಗೆಗೆ ಇರಿದು ಕೊಲೆಗೈದ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ.

ಘಟನೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಕೌಟುಂಬಿಕ ಪರಿಸ್ಥಿತಿ ಸೇರಿದಂತೆ ವಿವಿಧ ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮಾಹಿತಿ ತಿಳಿದು ಕೋಟ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.



