ಕುಳಾಯಿಯ ರಾಯನ್ ಇಂಟರ್‌ನ್ಯಾಷನಲ್ ಶಾಲೆಯ ಬಸ್‌ಗೆ ಖಾಸಗಿ ಟೂರಿಸ್ಟ್ ಬಸ್ ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ 13 ವಿದ್ಯಾರ್ಥಿಗಳು ಗಾಯಗೊಂಡ ಘಟನೆ ಕೊಲ್ನಾಡಿನ ಸುಂದರ ರಾಮ್ ಶೆಟ್ಟಿ ಕನ್ವೆನ್ಶನ್ ಹಾಲ್ ಎದುರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಶಾಲಾ ಬಸ್‌ನಲ್ಲಿ 16 ವಿದ್ಯಾರ್ಥಿಗಳಿದ್ದು, ಕೊಲ್ನಾಡಿನ ಕನ್ವೆನ್ಶನ್ ಹಾಲ್ ಎದುರು ಹೆದ್ದಾರಿ ಬದಿಯಲ್ಲಿ ಬಸ್ ನಿಲ್ಲಿಸಿ ಮಕ್ಕಳನ್ನು ಇಳಿಸಲಾಗುತ್ತಿತ್ತು. ಈ ವೇಳೆ ಅತಿವೇಗ ಹಾಗೂ ಅಜಾಗರೂಕತೆಯಿಂದ ಬಂದ ಟೂರಿಸ್ಟ್ ಬಸ್ ಶಾಲಾ ಬಸ್‌ನ ಹಿಂಭಾಗಕ್ಕೆ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಶಾಲಾ ಬಸ್ ಪಕ್ಕದಲ್ಲಿದ್ದ ಹೊಂಡಕ್ಕೆ ಬಿದ್ದಿದ್ದು, ಅದರಲ್ಲಿದ್ದ 13 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಘಟನೆಯ ಬೆನ್ನಲ್ಲೇ ಸ್ಥಳೀಯರು ಹಾಗೂ ಸಾರ್ವಜನಿಕರು ಗಾಯಗೊಂಡ ವಿದ್ಯಾರ್ಥಿಗಳನ್ನು ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮಂಗಳೂರು ಉತ್ತರ ಸಂಚಾರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತಕ್ಕೆ ಕಾರಣವಾದ ಟೂರಿಸ್ಟ್ ಬಸ್‌ನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.



