ಎಸ್ಐಆರ್ ವಿರುದ್ಧ ದೇಶವ್ಯಾಪಿ ನಡೆಯುತ್ತಿರುವ ‘ಪ್ರಜಾಪ್ರಭುತ್ವ ಮರಳಿ ಪಡೆಯೋಣ, ಅರ್ಹ ಮತದಾರರ ಹಕ್ಕುಗಳನ್ನು ರಕ್ಷಿಸೋಣ’ ಹೋರಾಟದ ಭಾಗವಾಗಿ ಶುಕ್ರವಾರ ನಗರದ ಕ್ಲಾಕ್ ಟವರ್ ಬಳಿ ‘ಜಂತರ್ ಮಂತರ್’ ಹೆಸರಿನಲ್ಲಿ ಧರಣಿ ಸತ್ಯಾಗ್ರಹ ನಡೆಯಿತು.

ಧರಣಿಯನ್ನುದ್ದೇಶಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಸಂವಿಧಾನದ ರಕ್ಷಕರಾಗಿರುವ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಹಾಗೂ ಚುನಾವಣಾ ಆಯೋಗದ ಆಯುಕ್ತರು ಪ್ರಧಾನಿ ಮತ್ತು ಗೃಹ ಸಚಿವರಿಗೆ ತಲೆಬಾಗುತ್ತಿರುವುದು ದುರಂತದ ಸಂಗತಿ ಎಂದು ಟೀಕಿಸಿದರು. ಇಂತಹ ಸಂದರ್ಭದಲ್ಲಿ ಸಂವಿಧಾನದ ರಕ್ಷಕರಾಗುವ ಜವಾಬ್ದಾರಿ ನಮ್ಮ ಮೇಲಿದೆ. ಆದ್ದರಿಂದ ಎಸ್ಐಆರ್ ವಿರುದ್ಧದ ಹೋರಾಟವನ್ನು ಮುಂದುವರಿಸಬೇಕು ಎಂದು ಕರೆ ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಜಾಪ್ರಭುತ್ವ ಉಳಿಸಿ ಆಂದೋಲನದ ದಕ್ಷಿಣ ಕನ್ನಡ ಜಿಲ್ಲಾ ಸಂಚಾಲಕ ಹಾಗೂ ನ್ಯಾಯವಾದಿ ವಿನೋದ್ ಮಸ್ಕರೇನ್ಹಸ್, ಎಸ್ಐಆರ್ ವಿರುದ್ಧ ಪ್ರತಿಭಟಿಸಲು ದೆಹಲಿಯ ಜಂತರ್ ಮಂತರ್ಗೆ ತೆರಳುವವರನ್ನು ತಡೆಯಲಾಗುತ್ತಿದೆ ಎಂದು ಆರೋಪಿಸಿದರು. ಹೀಗಾಗಿ ಇದೀಗ ಇಡೀ ದೇಶವೇ ಜಂತರ್ ಮಂತರ್ ಆಗುತ್ತಿದೆ ಎಂದು ಹೇಳಿದರು.



