ಕಳೆದ ಎರಡು ವರ್ಷಗಳಿಂದ ವಿಭಿನ್ನ ವಿನ್ಯಾಸ ಹಾಗೂ ವಿಶೇಷ ಚಿತ್ತಾರಗಳ ಮೂಲಕ ಗಮನ ಸೆಳೆಯುತ್ತಿದ್ದ ಶ್ರೀ ಮಣಿಕಂಠ ಯುವಶಕ್ತಿ ಕುದ್ರೆಬೆಟ್ಟು ತಂಡದ ಬೃಹದಾಕಾರದ ಗೂಡು ದೀಪ ಈ ಬಾರಿಯೂ ವಿಶೇಷ ಕಲಾಕೃತಿಗಳೊಂದಿಗೆ ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ಶ್ರೀ ಮಣಿಕಂಠ ಮಂದಿರದ ಕಲ್ಲುರ್ಟಿ ದೈವಸ್ಥಾನದ ಅಂಗಣದಲ್ಲಿ ನಿರ್ಮಿಸಲಾಗಿರುವ ಈ ಗೂಡು ದೀಪದಲ್ಲಿ ಈ ವರ್ಷದ ವಿಶೇಷವಾಗಿ ಹಲವು ಕ್ಷೇತ್ರಗಳ ಸಾಧಕರು ಹಾಗೂ ತುಳುನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಚಿತ್ತಾರಗಳನ್ನು ರೂಪಿಸಲಾಗಿದೆ.

ರಾಜಕೀಯ ಕ್ಷೇತ್ರದಲ್ಲಿ ಮುಖ್ಯಮಂತ್ರಿಯಾಗಿ ಹಾಗೂ ಪ್ರಧಾನಮಂತ್ರಿಯಾಗಿ ಸತತ 25 ವರ್ಷಗಳ ಸೇವಾವಧಿಯನ್ನು ಪೂರೈಸಿದ ನರೇಂದ್ರ ಮೋದಿ ಅವರ ಚಿತ್ರಣ, ವಿಮಾನ ಹಾರಾಟದ ವೇಳೆ ಸಹಪೈಲಟ್‌ನಿಂದ ಎದುರಾದ ಅಪಾಯದ ನಡುವೆಯೂ 184 ಮಂದಿಯ ಜೀವ ಉಳಿಸಿದ ಸಾಹಸಿ ಪೈಲಟ್ ಎಂದು ಬಣ್ಣಿಸಲಾಗಿರುವ ಸ್ಮಿತ್ ಮಕ್ಚರ್ ಅವರ ಸಾಹಸಗಾಥೆ ಹಾಗೂ ಪರಿಸರ ಸಂರಕ್ಷಣೆಯ ಸಂದೇಶ ಸಾರುವ ಸಾಲುಮರದ ತಿಮ್ಮಕ್ಕ ಅವರ ಚಿತ್ರಣಗಳು ಗೂಡು ದೀಪದ ವಿಶೇಷ ಆಕರ್ಷಣೆಯಾಗಿವೆ.

ಇದರೊಂದಿಗೆ ತುಳುನಾಡಿನ ಸಂಸ್ಕೃತಿ, ದೈವಾರಾಧನೆ ಹಾಗೂ ಮೂಲನಂಬಿಕೆಗಳನ್ನು ಉಳಿಸಿ ಬೆಳೆಸುವ ಆಶಯವನ್ನೂ ಚಿತ್ತಾರಗಳ ಮೂಲಕ ಅಭಿವ್ಯಕ್ತಿಸಲಾಗಿದೆ. ಪರಿಸರ ಸಂರಕ್ಷಣೆ ಮತ್ತು ಸಾಂಸ್ಕೃತಿಕ ಪರಂಪರೆಯ ಮಹತ್ವವನ್ನು ಸಾರುವ ವಿಭಿನ್ನ ಕಲಾಕೃತಿಗಳು ಗೂಡು ದೀಪಕ್ಕೆ ಮತ್ತಷ್ಟು ಮೆರುಗು ನೀಡಿವೆ.

ಶ್ರೀ ಮಣಿಕಂಠ ಯುವಶಕ್ತಿ ಕುಧ್ರೆಬೆಟ್ಟು ತಂಡದ ಈ ಸೃಜನಾತ್ಮಕ ಪ್ರಯತ್ನ ಸ್ಥಳೀಯರ ಗಮನ ಸೆಳೆಯುತ್ತಿದ್ದು, ಗೂಡು ದೀಪವನ್ನು ವೀಕ್ಷಿಸಲು ಜನರು ಆಸಕ್ತಿ ತೋರುತ್ತಿದ್ದಾರೆ.



