ಎರಡು ಬುಲೆಟ್ ಬೈಕ್‌ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ನಿಯಂತ್ರಣ ತಪ್ಪಿದ ಸವಾರನೊಬ್ಬ ಸುಮಾರು 40 ಅಡಿ ಎತ್ತರದ ಬಿ.ಸಿ.ರೋಡ್ ಫ್ಲೈಓವರ್‌ನಿಂದ ಕೆಳಗಿನ ಸರ್ವೀಸ್ ರಸ್ತೆಗೆ ಎಸೆಯಲ್ಪಟ್ಟ ಘಟನೆ ನಡೆದಿದೆ. ಅದೃಷ್ಟವಶಾತ್ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದು, ಅಪಘಾತದ ಭೀಕರ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಅಪಘಾತದಲ್ಲಿ ಆರ್ವಿನ್ ಅತ್ತಾವರ ಗಾಯಗೊಂಡ ಬೈಕ್ ಸವಾರ. ಬೆಂಗಳೂರಿನಲ್ಲಿ ವಾಸವಾಗಿರುವ ವಿದ್ಯಾರ್ಥಿನಿ ದಿಯಾ ಕೊಟ್ಟಾರಿ ಎಂಬಾಕೆ ಆತನ ಸ್ನೇಹಿತೆಯಾಗಿದ್ದು, ಆಕೆಯನ್ನು ಕರೆದುಕೊಂಡು ಬರಲು ಆರ್ವಿನ್ ತನ್ನ ಬುಲೆಟ್ ಬೈಕ್‌ನಲ್ಲಿ ಹಾಸನಕ್ಕೆ ತೆರಳಿದ್ದ ಎನ್ನಲಾಗಿದೆ. ಬಳಿಕ ಇಬ್ಬರೂ ಪ್ರತ್ಯೇಕ ಬುಲೆಟ್ ಬೈಕ್‌ಗಳಲ್ಲಿ ಪ್ರಯಾಣಿಸುತ್ತಾ ಬಂಟ್ವಾಳದ ಮೂಲಕ ಸಾಗುತ್ತಿದ್ದರು.

ಈ ವೇಳೆ ಬಿ.ಸಿ.ರೋಡ್ ಫ್ಲೈಓವರ್‌ನ ಮಧ್ಯಭಾಗದಲ್ಲಿ ಎರಡೂ ಬೈಕ್‌ಗಳ ನಡುವೆ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಆರ್ವಿನ್ ಬೈಕ್‌ನ ನಿಯಂತ್ರಣ ಕಳೆದುಕೊಂಡು ಮೇಲಕ್ಕೆ ಎಸೆಯಲ್ಪಟ್ಟು ಸುಮಾರು 40 ಅಡಿ ಎತ್ತರದ ಫ್ಲೈಓವರ್‌ನಿಂದ ಕೆಳಗಿನ ಸರ್ವೀಸ್ ರಸ್ತೆಗೆ ಬಿದ್ದಿದ್ದಾನೆ.

ಇಷ್ಟೊಂದು ಎತ್ತರದಿಂದ ಕೆಳಕ್ಕೆ ಬಿದ್ದರೂ ಆರ್ವಿನ್ ಪ್ರಾಣಾಪಾಯದಿಂದ ಪಾರಾಗಿರುವುದು ಅಚ್ಚರಿ ಮೂಡಿಸಿದೆ. ಅಪಘಾತದ ವೇಳೆ ಕೈ ಸೇರಿದಂತೆ ದೇಹದ ಇತರ ಭಾಗಗಳಿಗೆ ರಕ್ಷಣಾತ್ಮಕ ಕವಚಗಳನ್ನು ಧರಿಸಿದ್ದ ಎನ್ನಲಾಗಿದ್ದು, ಇದರಿಂದ ಗಾಯದ ತೀವ್ರತೆ ಕಡಿಮೆಯಾಗಿರಬಹುದು ಎಂದು ಅಂದಾಜಿಸಲಾಗಿದೆ.
ಫ್ಲೈಓವರ್‌ನಿಂದ ಬೈಕ್ ಸವಾರ ಕೆಳಕ್ಕೆ ಬೀಳುವ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿದೆ.



