ಸೂರಿಕುಮೇರು–ಕಾಯರಡ್ಕ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೃದ್ಧ ಮಹಿಳೆಯೊಬ್ಬರ ಸರವನ್ನು ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಹಾಡಹಗಲೇ ಕಸಿದು ಪರಾರಿಯಾಗಿರುವ ಘಟನೆ ಗುರುವಾರ ನಡೆದಿದೆ.

ಬರಿಮಾರು ರಸ್ತೆಯ ಕಡೆಯಿಂದ ಬೈಕ್‌ನಲ್ಲಿ ಬಂದಿದ್ದ ಇಬ್ಬರು ಯುವಕರು ಮುಖಕ್ಕೆ ಮಾಸ್ಕ್ ಧರಿಸಿದ್ದರು. ದಾರಿ ಕೇಳುವ ನೆಪದಲ್ಲಿ ವೃದ್ಧೆಯ ಬಳಿ ಬಂದ ದುಷ್ಕರ್ಮಿಗಳು, ಕ್ಷಣಾರ್ಧದಲ್ಲಿ ಆಕೆಯ ಕುತ್ತಿಗೆಯಲ್ಲಿದ್ದ ಸರವನ್ನು ಕಸಿದುಕೊಂಡು ಅದೇ ರಸ್ತೆಯಲ್ಲಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಘಟನೆಯ ಸಮೀಪದ ನೂತನ ಕಟ್ಟಡವೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಕೃತ್ಯದ ದೃಶ್ಯಗಳು ಸೆರೆಯಾಗಿವೆ ಎಂದು ತಿಳಿದುಬಂದಿದೆ. ಆರೋಪಿಗಳು ಪರಾರಿಯಾದ ಬರಿಮಾರು ರಸ್ತೆ ಬಿ.ಸಿ.ರೋಡ್, ಮಂಗಳೂರು ಹಾಗೂ ಉಪ್ಪಿನಂಗಡಿ ಭಾಗಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದ್ದು, ಪೊಲೀಸರು ಸಿಸಿಟಿವಿ ದೃಶ್ಯಗಳ ಆಧಾರದಲ್ಲಿ ಆರೋಪಿಗಳ ಪತ್ತೆಗೆ ಮುಂದಾಗುವ ಸಾಧ್ಯತೆಯಿದೆ.
ಇನ್ನೊಂದು ವಿಶೇಷವೆಂದರೆ, ಮಹಿಳೆಯ ಕುತ್ತಿಗೆಯಿಂದ ಕಸಿದುಕೊಂಡ ಸರ ಚಿನ್ನದ್ದಲ್ಲ ಎನ್ನಲಾಗಿದೆ. ಚಿನ್ನವೆಂದು ಭಾವಿಸಿ ಸರ ಕಸಿದ ದುಷ್ಕರ್ಮಿಗಳೇ ಮೋಸ ಹೋದಂತಾಗಿದೆ.
ಹಾಡಹಗಲೇ ನಡೆದ ಈ ಕೃತ್ಯ ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದು, ಮಹಿಳೆಯರ ಸುರಕ್ಷತೆ ಕುರಿತು ಸಾರ್ವಜನಿಕರು ಕಳವಳ ವ್ಯಕ್ತಪಡಿಸಿದ್ದಾರೆ.



