ತುಳುನಾಡಿನ ಸಂಸ್ಕೃತಿ, ಪರಂಪರೆ, ದೈವಾರಾಧನೆ ಹಾಗೂ ಕೃಷಿ ಪ್ರಧಾನ ಕುಟುಂಬದ ಬದುಕಿನ ಕಥಾಹಂದರ ಹೊಂದಿರುವ ‘ಬೆಲ್ಲದಗಟ್ಟಿ’ ತುಳು ಚಲನಚಿತ್ರ ನವೆಂಬರ್ 20ರಂದು ತುಳುನಾಡಿನಾದ್ಯಂತ ತೆರೆಕಾಣಲಿದೆ.

ಉದಯೋನ್ಮುಖ ನಟ ಹಾಗೂ ನಿರ್ದೇಶಕ ರಾಜಾ ಕಟಪಾಡಿ ಅವರ ಸಾರಥ್ಯದಲ್ಲಿ ಕಟೀಲ್ ಪ್ರಸಾದ್ ಪ್ರೊಡಕ್ಷನ್ಸ್ ಕಟಪಾಡಿ ಲಾಂಛನದಲ್ಲಿ ಈ ಚಿತ್ರ ನಿರ್ಮಾಣಗೊಂಡಿದೆ. ರಾಮಕೃಷ್ಣ ಸುಜೀರ್ ಬಾರ್ದಿಲಾ ಅವರು ಚಿತ್ರದ ನಿರ್ಮಾಪಕರಾಗಿದ್ದು, ಜಗತ್ ರಾಜಪಾಲ್ ಬಿಕರ್ಣಕಟ್ಟೆ ಅವರ ಪ್ರೇರಣೆಯಿಂದ ಚಿತ್ರ ರೂಪುಗೊಂಡಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ನಿರ್ದೇಶಕ ರಾಜಾ ಕಟಪಾಡಿ, ಕೃಷಿ ಪ್ರಧಾನ ಕುಟುಂಬವೊಂದರ ಸಾಂಸಾರಿಕ ಬದುಕಿನ ಹಿನ್ನೆಲೆಯಲ್ಲಿ ಚಿತ್ರದ ಕಥೆ ಹೆಣೆಯಲಾಗಿದೆ ಎಂದು ತಿಳಿಸಿದರು. ಹಿರಿಯರ ಆಚರಣೆಗಳು, ಕೃಷಿ ಚಟುವಟಿಕೆಗಳು, ದೈವಾರಾಧನೆ, ಧಾರ್ಮಿಕ ಮತ್ತು ಜಾನಪದ ಸಂಪ್ರದಾಯಗಳು, ಕಟ್ಟುಪಾಡುಗಳು ಹಾಗೂ ಶ್ರಮದಾಯಕ ಜೀವನಪದ್ಧತಿಯನ್ನು ಚಿತ್ರದಲ್ಲಿ ನೈಜವಾಗಿ ಕಟ್ಟಿಕೊಡಲಾಗಿದೆ ಎಂದರು.
ತಪ್ಪು ಕಲ್ಪನೆಯಿಂದ ದೈವದ ಮುಂದೆ ಮಾಡುವ ಪ್ರಮಾಣವೊಂದು ಕುಟುಂಬದಲ್ಲಿ ಸೃಷ್ಟಿಸುವ ಘಟನೆಗಳು, ಅದರ ಪರಿಣಾಮಗಳು ಹಾಗೂ ತಪ್ಪಿನ ಅರಿವಿನೊಂದಿಗೆ ತಪ್ಪು-ಸರಿಗಳ ನಡುವೆ ನಡೆಯುವ ಸಂಘರ್ಷ ಚಿತ್ರದ ಪ್ರಮುಖ ಕಥಾವಸ್ತುವಾಗಿದೆ ಎಂದು ಅವರು ವಿವರಿಸಿದರು.



