ಕಾರೊಂದು ರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ರಿಕ್ಷಾ ಚಾಲಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ನವೆಂಬರ್ 13ರಂದು ನಡೆದಿದೆ.

ಪೆರ್ನೆ-ಬಿಳಿಯೂರು ಸಮೀಪ ಈ ಅಪಘಾತ ಸಂಭವಿಸಿದ್ದು, ಗಾಯಗೊಂಡಿದ್ದ ರಿಕ್ಷಾ ಚಾಲಕನನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಮೃತರನ್ನು ತೆಕ್ಕಾರು ಗ್ರಾಮದ ನೈತ್ತಡ್ಕ ನಿವಾಸಿ ಸದಾಶಿವ ಎಂದು ಗುರುತಿಸಲಾಗಿದೆ. ಅವರು ಉಪ್ಪಿನಂಗಡಿಯಲ್ಲಿ ರಿಕ್ಷಾ ನಿಲುಗಡೆ ಮಾಡಿಕೊಂಡು ಬಾಡಿಗೆ ನಡೆಸುತ್ತಿದ್ದರು.

ಇದೇ ವೇಳೆ, ವೈದ್ಯರ ನಿರ್ಲಕ್ಷ್ಯದಿಂದಲೇ ಗಾಯಾಳು ಚಾಲಕ ಮೃತಪಟ್ಟಿದ್ದಾರೆ ಎಂದು ಆರೋಪಿಸಿ ಮೃತರ ಕುಟುಂಬಸ್ಥರು, ಊರವರು ಹಾಗೂ ರಿಕ್ಷಾ ಚಾಲಕರು ಆಸ್ಪತ್ರೆಯ ಮುಂದೆ ಜಮಾಯಿಸಿದ ಘಟನೆ ನಡೆದಿದೆ. ಈ ಆರೋಪದ ಹಿನ್ನೆಲೆಯಲ್ಲಿ ಆಸ್ಪತ್ರೆಯ ಆವರಣದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.



