ಕಾಪು ವಿಧಾನಸಭಾ ಕ್ಷೇತ್ರದ 80 ಬಡಗುಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು ₹3.30 ಕೋಟಿ ವೆಚ್ಚದ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ಬುಧವಾರ ಚಾಲನೆ ನೀಡಿದರು.

ಶಾಸಕರ ಶಿಫಾರಸ್ಸಿನ ಮೇರೆಗೆ ₹2.55 ಕೋಟಿ ವೆಚ್ಚದ ರಸ್ತೆ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದ ಅವರು, ಈಗಾಗಲೇ ₹75 ಲಕ್ಷ ವೆಚ್ಚದಲ್ಲಿ ಪೂರ್ಣಗೊಂಡ ಕಾಮಗಾರಿಗಳನ್ನು ಉದ್ಘಾಟಿಸಿದರು.

₹75 ಲಕ್ಷ ವೆಚ್ಚದಲ್ಲಿ ಕುಕ್ಕುದಕಟ್ಟೆ ರಸ್ತೆ, ಗೋಪಾಲ ನಾಯಕ್ ಮನೆವರೆಗಿನ ರಸ್ತೆ, ಶಾಂತಿನಗರ ಸಿದ್ಧಿವಿನಾಯಕ ಸ್ಟೋರ್ಸ್ ಬಳಿಯ ರಸ್ತೆ ಹಾಗೂ ರಾಜೀವನಗರ ಅಡ್ಡರಸ್ತೆ ಅಭಿವೃದ್ಧಿಪಡಿಸಲಾಗಿದೆ.
ಇನ್ನು ₹2.55 ಕೋಟಿ ವೆಚ್ಚದಲ್ಲಿ ಆರ್‌ಬಿ ದಶರಥ ನಗರ ರಸ್ತೆ, ರಾಜೀವನಗರ ರಸ್ತೆ, ಆರ್‌ಬಿ ವೈಷ್ಣವಿ ದೇವಸ್ಥಾನ ಸಂಪರ್ಕ ರಸ್ತೆ ಹಾಗೂ ಕಬ್ಯಾಡಿ ಲಕ್ಷ್ಮೀನಾರಾಯಣ ಪ್ರಭು ಮನೆ ಬಳಿಯ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಉಪೇಂದ್ರ ನಾಯಕ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೇಶವ ಕೋಟ್ಯಾನ್ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.



