ಬಿ.ಮೂಡ ಗ್ರಾಮದ ಅಗ್ರದಬೈಲು, ಬಿ.ಸಿ.ರೋಡ್‌ನಲ್ಲಿರುವ ಕಲ್ಲುರ್ಟಿ, ಪಂಜುರ್ಲಿ, ಕೊರತಿ ಹಾಗೂ ಗುಳಿಗ ದೈವಸ್ಥಾನಗಳಲ್ಲಿ ಕಳ್ಳರು ಚಿನ್ನ, ಬೆಳ್ಳಿ ಹಾಗೂ ಹಿತ್ತಾಳೆಯ ಆಭರಣ ಸೇರಿದಂತೆ ಸುಮಾರು 1.33 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ಕಳವುಗೈದಿದ್ದಾರೆ.

ನ.15ರಂದು ಪೂಜೆಯ ಬಳಿಕ ದೈವಸ್ಥಾನಕ್ಕೆ ಬೀಗ ಹಾಕಲಾಗಿದ್ದು, ನ.16ರಂದು ಬೆಳಗ್ಗೆ ಸಂಕ್ರಮಣದ ಹಿನ್ನೆಲೆಯಲ್ಲಿ ತೆರಳಿದಾಗ ಕಳ್ಳತನ ಬೆಳಕಿಗೆ ಬಂದಿದೆ. ಬಾಗಿಲಿನ ಕೊಂಡಿಯ ಸ್ಕ್ರೂಗಳನ್ನು ತೆಗೆದು ಒಳನುಗ್ಗಿದ ಕಳ್ಳರು, 300 ಗ್ರಾಂ ತೂಕದ ಬೆಳ್ಳಿಯ ತಲೆಪಟ್ಟಿ, 6.50 ಗ್ರಾಂ ಚಿನ್ನಾಭರಣ, ಬೆಳ್ಳಿಯ ತಂಬಿಗೆ, ಹಿತ್ತಾಳೆಯ ಅಲಂಕಾರಿಕ ಹೂವುಗಳು, ತಂಬಿಗೆಗಳು, ಕಾಲುದೀಪ ಹಾಗೂ ಸರಪಳಿಗಳನ್ನು ಕಳವು ಮಾಡಿದ್ದಾರೆ.
ಈ ಬಗ್ಗೆ ದೀಕ್ಷಿತ್ ಆಚಾರ್ಯ ನೀಡಿದ ದೂರಿನಂತೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.



