ಪುಣಚ ಗ್ರಾಮದ ದಂಬೆ ಎಂಬಲ್ಲಿ ಸಾರ್ವಜನಿಕ ತೋಡಿನಿಂದ ಅಕ್ರಮವಾಗಿ ಮರಳು ತೆಗೆದು ಪಿಕಪ್ ವಾಹನಕ್ಕೆ ತುಂಬಿಸುತ್ತಿದ್ದ ನಾಲ್ವರನ್ನು ವಿಟ್ಲ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನ.19ರಂದು ಬೆಳಿಗ್ಗೆ ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದ ವಿಟ್ಲ ಠಾಣೆಯ ತನಿಖಾ ವಿಭಾಗದ ಪಿಎಸ್‌ಐ ರತ್ನಕುಮಾರ್ ಅವರು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ದಾಳಿ ನಡೆಸಿದರು. ಈ ವೇಳೆ ಮರಳು ತುಂಬಿಸುತ್ತಿದ್ದ ವಿಶ್ವಾಸ್ ಎಚ್., ಶಶಿಧರ, ಹರೀಶ್ ಅಜ್ಜಿನಡ್ಕ ಹಾಗೂ ಕೇಪು ಗ್ರಾಮದ ಪುಷ್ಪರಾಜ್ ಎನ್. ಅವರನ್ನು ವಶಕ್ಕೆ ಪಡೆಯಲಾಯಿತು.
ಮರಳುಗಾರಿಕೆಗೆ ಯಾವುದೇ ಪರವಾನಿಗೆ ಹೊಂದಿರದ ಹಿನ್ನೆಲೆಯಲ್ಲಿ ಮರಳು ತುಂಬಿದ್ದ ಪಿಕಪ್ ವಾಹನ ಸೇರಿದಂತೆ ಇತರ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಕುರಿತು ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.



